ಜಿಲ್ಲೆ

ಮಕ್ಕಳ ಮನಸ್ಸು ಹದಗೊಳಿಸುವ ಪ್ರಾಕಾರ ಚಿತ್ರಕಲೆ...

ಕಲಾವಿದ ರಮೇಶ ರಾವ್​ ಅನಿಸಿಕೆ

ವಿಶ್ವ ಕಲಾ ಸಿಂಧು ಪ್ರಶಸ್ತಿ ಸ್ವೀಕಾರ

ಬಾಲ ಲೀಲಾ ಬೇಸಿಗೆ ಶಿಬಿರ ಸಂಪನ್ನ

ವಿಜಯವಾಣಿ ಸುದ್ದಿಜಾಲ ಉಡುಪಿ

ಮಕ್ಕಳ ಮನಸ್ಸನ್ನು ಹದಗೊಳಿಸಲು ಚಿತ್ರಕಲೆ ಬಹು ಮುಖ್ಯವಾದ ಕಲಾ ಪ್ರಾಕಾರವಾಗಿದೆ. ಇಂದಿನ ಮಕ್ಕಳು ಮೊಬೈಲ್​ನಲ್ಲಿ ಮುಳುಗುವ ಬದಲು ಸೃಜನಶೀಲರಾಗಬೇಕಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಇಂತಹ ಉಪಯುಕ್ತ ಚಟುವಟಿಕೆ ಇಂದಿನ ಪ್ರಮುಖ ಅವಶ್ಯಕತೆಯಾಗಿದೆ ಎಂದು ಆರ್ಟಿಸ್ಟ್​ ಫೋರಂನ ಅಧ್ಯಕ್ಷ, ಖ್ಯಾತ ಚಿತ್ರಕಲಾವಿದ ರಮೇಶ ರಾವ್​ ಅನಿಸಿಕೆ ವ್ಯಕ್ತಪಡಿಸಿದರು.

ಹಾವಂಜೆಯ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಭಾವನಾ ಫೌಂಡೇಷನ್ ​(ರಿ.) ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ವತಿಯಿಂದ ಗ್ರಾಮೀಣ ಭಾಗದ ಚಿಣ್ಣರಿಗಾಗಿ ಆಯೋಜಿಸಿದ್ದ ಬಾಲ ಲೀಲಾ ಬೇಸಿಗೆ ಶಿಬಿರ ಸಂಪನ್ನಗೊಂಡಿದ್ದು ಏ.13ರಂದು ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ ವಿಶ್ವ ಕಲಾ ಸಿಂಧು ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.

ಭಾವನಾ ಪುರಸ್ಕಾರ

ಭಾವನಾ ಪುರಸ್ಕಾರ ಸ್ವೀಕರಿಸಿದ ರಂಗಭೂಮಿ ಕಲಾವಿದ, ಪತ್ರಕರ್ತ ನಾಗರಾಜ ವರ್ಕಾಡಿ ಮಾತನಾಡಿ, ಪ್ರಶಸ್ತಿಯು ನಮ್ಮ ಕಾರ್ಯ ಕ್ಷೇತ್ರದ ಜವಾಬ್ದಾರಿ ಹೆಚ್ಚಿಸುವ ಎಚ್ಚರಿಕೆಯಾಗಿದೆ. ರಂಗಭೂಮಿ ವಲಯದಲ್ಲಿ ಇನ್ನಷ್ಟು ಕಾರ್ಯ ಮಾಡಲು ಪ್ರೇರಣೆಯಾಗಿದೆ ಎಂದರು.

ಯಕ್ಷಗುರು ಹಾವಂಜೆ ಮಂಜುನಾಥ ರಾವ್​ ಅಧ್ಯಕ್ಷತೆ ವಹಿಸಿದ್ದರು. ಮಮತಾ ಮುರಾರ್ಜಿ ಶೆಟ್ಟಿ ಉಪಸ್ಥಿತರಿದ್ದರು.

ಶಿಬಿರದ ಸಂಯೋಜಕ ಡಾ. ಜನಾರ್ದನ ರಾವ್​ ಹಾವಂಜೆ ಕಾರ್ಯಕ್ರಮ ನಿರ್ವಹಿಸಿದರು. ವಿದುಷಿ ಅಕ್ಷತಾ ವಿಶು ರಾವ್​ ಸನ್ಮಾನಪತ್ರ ವಾಚಿಸಿದರು. ವಿಶು ರಾವ್​ ಹಾವಂಜೆ ವಂದಿಸಿದರು.

ನಾಲ್ಕು ದಿನ.. ಮಸ್ತಕದೊಳಗೆ ಜ್ಞಾನಗಳ ಸಮ್ಮಿಲನ

ಗ್ರಾಮೀಣ ಭಾಗವಾದ ಹಾವಂಜೆಯ ಪ್ರಶಾಂತ ಪರಿಸರದಲ್ಲಿ ನಾಲ್ಕು ದಿನ ನಡೆದ ಬಾಲ ಲೀಲಾ ಬೇಸಿಗೆ ಶಿಬಿರ ಮಕ್ಕಳಲ್ಲಿ ಲವಲವಿಕೆ ತುಂಬಿತ್ತು. ಕರಕುಶಲ ಕಲೆ, ಸಂಗೀತ, ಅಭಿನಯ, ದೇಸೀಯ ಆಟಗಳು, ಪಕ್ಷಿ ವೀಕ್ಷಣೆ, ಸರೀಸೃಪಗಳ ಪರಿಚಯ, ಮನೆಮದ್ದು, ಮಕ್ಕಳ ಸಿನಿಮಾ, ಹೀಗೆ ಅನೇಕ ವಿಷಯಗಳ ಸೃಜನಶೀಲ ಅನುಭವ ಮಕ್ಕಳಿಗಾಗಿತ್ತು. ಶಾಲೆಗೆ ರಜಾವೆಂದು ನೆಂಟರ ಮನೆಗೆ ತಿರುಗುವವುದಕ್ಕೆ ಕೆಲದಿನ ಬ್ರೇಕ್​ ಹಾಕಿದ ಒಂದಿಷ್ಟು ಚಿಣ್ಣರು, ಪುಟ್ಟ ಮಸ್ತಕದೊಳಗೆ ಅಪಾರ ಜ್ಞಾನಗಳ ಸಮ್ಮಿಲನ ಮಾಡಿಕೊಂಡರು. ಹೊಸ ಕಲಿಕೆಯ ಮೂಲಕ ಜೀವನದ ಸಂತಸದ ಕ್ಷಣಗಳನ್ನು ಹಚ್ಚಹಸಿರಾಗಿಸಿಕೊಂಡರು.
ಭಾವನಾ ಫೌಂಡೇಷನ್​ ಸಂಘಟಿಸಿದ ಈ ಬೇಸಿಗೆ ಶಿಬಿರದಿಂದ ಭಾರತೀಯ ಸಾಂಪ್ರದಾಯಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಹಾಗೂ ನಮ್ಮ ಕಲೆ-ಸಂಸ್ಕೃತಿ ಎತ್ತಿ ಹಿಡಿಯುವ ಕಾರ್ಯವಾಗಿದೆ. ರಜಾ ದಿನಗಳಲ್ಲಿ ಮಕ್ಕಳ ಬದುಕು ಹಸನಾಗುವಲ್ಲಿ, ಆತ್ಮಸ್ಥೈರ್ಯ ಹೆಚ್ಚುವಲ್ಲಿ ಬಾಲ ಲೀಲಾ ಶಿಬಿರ ಸಹಕಾರಿಯಾಗಿದೆ. | ಸಂಪತ್​ ಶೆಟ್ಟಿ. ಉದ್ಯಮಿ ಅಭಿವೃದ್ಧಿ ಹೊಂದಿದ ನಗರಗಳಲ್ಲಿರುವ ಮಕ್ಕಳಿಗೆ ಎಲ್ಲ ಸೌಲಭ್ಯ ಸುಲಭವಾಗಿ ಸಿಗುತ್ತದೆ. ಆದರೆ, ಗ್ರಾಮೀಣ ಭಾಗದಲ್ಲಿರುವ ಚಿಣ್ಣರಿಗೆ ಸುಲಭವಾಗಿ ಲಭಿಸುವುದಿಲ್ಲ. ತಂತ್ರಜ್ಞಾನದ ಈ ಯುಗದಲ್ಲಿ ಎಲ್ಲವೂ ಕೈ ಬೆರಳಲ್ಲಿ ಲಭಿಸುವಾಗ ಇಂತಹ ಶಿಬಿರದ ಅಗತ್ಯತೆ ಇತ್ತೇ ಎಂಬ ಪ್ರಶ್ನೆ ಮೂಡಬಹುದು. ನೋಡಿ ಕಲಿಯುವುದಕ್ಕಿಂತ ಮಾಡಿ ಕಲಿತಾಗ ಹೆಚ್ಚಿನ ಅನುಭವ ಲಭಿಸುತ್ತದೆ. ನಮ್ಮ ಮೌಲ್ಯ, ದೇಸೀಯ ಕಲೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಬಾಲ ಲೀಲಾ ಶಿಬಿರ ತಿಳಿಸಿಕೊಡುವ ಪ್ರಯತ್ನ ಮಾಡಿದೆ. ಮಕ್ಕಳೆಲ್ಲರೂ ಲವಲವಿಕೆಯಿಂದ ಅನೇಕ ವಿಚಾರ ಅರಿತುಕೊಂಡಿರುವುದು ನಿಜಕ್ಕೂ ಸಂತಸ ತಂದಿದೆ. | ಡಾ. ಜನಾರ್ದನ ರಾವ್​ ಹಾವಂಜೆ. ಕಾವಿ ಕಲಾವಿದ, ಶಿಬಿರ ಆಯೋಜಕ