ಬೆಂಗಳೂರು: ಬಹುತ್ವದ ದೇಶ ಈ ಭಾರತದಲ್ಲಿ ಎಲ್ಲಾ ಧರ್ಮ, ಜಾತಿ, ಭಾಷೆ, ಪ್ರಾಂತ್ರ್ಯದವರು ಒಟ್ಟಾಗಿ ಬಾಳಬೇಕು. ಎಲ್ಲರಲ್ಲೂ ಮನುಷ್ಯತ್ವ, ಸಹಿಷ್ಣುತೆ, ಪ್ರೀತಿ ವಿಶ್ವಾಸ ಬೆಳೆಸಿಕೊಳ್ಳಬೇಕು. ಆಗ ರಾಷ್ಟ್ರದ ಏಳಿಗೆ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ತ್ಯಾಗ ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬದ ಅಂಗವಾಗಿ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸೋಮವಾರ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮುಸಲ್ಮಾನ ಬಾಂಧವರಿಗೆ ಬ್ರಕೀದ್ ಶುಭಾಶಯಗಳನ್ನು ಕೋರಿ ಅವರು ಮಾತನಾಡಿದರು.
ಎಲ್ಲರೂ ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಮನುಕುಲಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿದ್ದೀರಿ. ಸಮಾಜದಲ್ಲಿ ನಾವೆಲ್ಲರೂ ಅಣ್ಣತಮ್ಮಂದಿರ ಹಾಗೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳಬೇಕು. ಅನ್ಯ ಧರ್ಮಗಳನ್ನೂ ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಸರ್ವ ಧರ್ಮ ಸಮನ್ವಯ ದಲ್ಲಿ, ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವ ನಮ್ಮ ಸರ್ಕಾರ ಸಂವಿಧಾನ ಹೇಳುವಂತೆ ನಡೆದುಕೊಳ್ಳಲಿದೆ. ಯಾವುದೇ ತಾರತಮ್ಯ ಮಾಡುವುದಿಲ್ಲ. ಕರ್ನಾಟಕದ ಏಳು ಕೋಟಿ ಜನರನ್ನು ಅಲ್ಪಸಂಖ್ಯಾತರೂ, ಬಹುಸಂಖ್ಯಾತರು ಎಂಬ ಯಾವುದೇ ತಾರತಮ್ಯ ಮಾಡದೆ ಒಂದೇ ರೀತಿಯಲ್ಲಿ ರಕ್ಷಣೆ ಮಾಡುವುದಾಗಿ ಭರವಸೆ ನೀಡಿದರು. ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಇತರರು ಉಪಸ್ಥಿತಿರದ್ದರು.