ಕಿಕ್ಕೇರಿ: ಮುಸ್ಲಿಮರು ಹೊಸ ಉಡುಗೆ ತೊಡುಗೆ ತೊಟ್ಟು ಹೋಬಳಿಯಾದ್ಯಂತ ಬಕ್ರೀದ್ ಹಬ್ಬವನ್ನು ಶನಿವಾರ ಸಂಭ್ರಮದಿಂದ ಆಚರಿಸಿದರು.
ಮೊದಲಿಗೆ ಇಲ್ಲಿನ ಜಾಮೀಯಾ ಮಸೀದಿಯಲ್ಲಿ ಸೇರಿದ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕೋಟೆ ಗಣಪತಿ, ಅಂಗಡಿಬೀದಿ, ಮಂದಗೆರೆ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿದರು. ಗ್ರಾಮದ ಹೊರವಲಯದ ಈದ್ಗಾ ಮೈದಾನದಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಧರ್ಮಗುರು ಫಕ್ರಿಯ ಆಲಂ ಅವರು ಕುರಾನ್ ಪಠಣ ಮಾಡಿದರು. ಅಲ್ಲಾನ ಅಣತಿಯಂತೆ ಸೌಹಾರ್ದತೆ, ಶಾಂತಿ ನೆಮ್ಮದಿ, ದಾನ ಧರ್ವಕ್ಕೆ ಮುಂದಾಗಬೇಕು. ತ್ಯಾಗ, ಪ್ರೀತಿ, ಬಲಿದಾನದ ಸಂಕೇತವಾದ ಹಬ್ಬದಂದು ಬಡವರಿಗೆ ಕೈಯಲ್ಲಿ ಅನುಕೂಲವಾದಷ್ಟು ದಾನ ಮಾಡುವ ಪ್ರವೃತ್ತಿ ಬೆಳೆಸಿ ಮಾನವೀಯತೆ ಮೆರೆಯಬೇಕು ಎಂದರು.
ಹಬ್ಬದ ಸಡಗರವನ್ನು ಪರಸ್ಪರ ಆಲಿಂಗನ ಮಾಡಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ಹಿರಿಯರೊಂದಿಗೆ ಪುಟಾಣಿ ಮಕ್ಕಳು ಹೊಸ ಬಟ್ಟೆ ಧರಿಸಿ ಸಂಭ್ರಮಿಸಿದರು. ಮಂದಗೆರೆ ಹಾಗೂ ಆನೆಗೊಳ ಗ್ರಾಮದಲ್ಲಿಯೂ ಮುಸ್ಲಿಮರು ಜಾಮೀಯಾ ಮಸೀದಿಯಲ್ಲಿ ಹೊಸಬಟ್ಟೆ ತೊಟ್ಟು ಸಂಭ್ರಮದಿಂಧ ಹಬ್ಬ ಆಚರಿಸಿದರು.