ಜಿಲ್ಲೆ

ಕೊಳ್ಳೇಗಾಲದಲ್ಲಿ ಸಂಭ್ರಮದಿಂದ ಬಕ್ರೀದ್ ಆಚರಣೆ

ಕೊಳ್ಳೇಗಾಲ: ತ್ಯಾಗ, ಬಲಿದಾನಗಳ ಸಂಕೇತವಾದ ಮುಸ್ಲಿಮರ ಪವಿತ್ರ ಹಬ್ಬ ಈದ್-ಉಲ್-ಅಧಾ(ಬಕ್ರಿದ್)ನ್ನು ಪಟ್ಟಣದಲ್ಲಿ ಸಂಭ್ರಮದಿಂದ ಶನಿವಾರ ಆಚರಿಸಲಾಯಿತು.

ಹಬ್ಬದ ಪ್ರಯುಕ್ತ ಮುಸ್ಲಿಮರು ಪ್ರತಿ ವರ್ಷದಂತೆ ಬೆಳೆಗ್ಗೆ 8ಗಂಟೆಗೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಖುದ್ದೂಸಿಯ ಮಸೀದಿ ವೃತ್ತದಲ್ಲಿ ಜಮಾವಣೆಗೊಂಡು ಅಲ್ಲಿಂದ ಮೆರವಣಿಗೆ ಹೊರಟು ರಸ್ತೆಯುದ್ಧಕ್ಕೂ ಅಲ್ಲಾಹನ ಸ್ಮರಣೆಯ ವಾಕ್ಯಗಳನ್ನು ಪಠಿಸುತ್ತಾ ಮೆರವಣಿಗೆ ಮೂಲಕ ಸಾಲಾಗಿ ಈದ್ಗಾ ಮೈದಾನಕ್ಕೆ ತೆರಳಿದರು. ಬಳಿಕ ಸಾಮೂಹಿಕ ಪ್ರಾರ್ಥನೆಯನ್ನು ಮಾಡಿದರು.

ಮುಸ್ಲಿಂ ಧರ್ಮ ಗುರು ಹಜರತ್ ಅಬ್ದುಲ್ ತವಾಬ್ ಅವರು ಸಾಮೂಹಿಕ ನಮಾಜ್ ನೆರವೇರಿಸಿ ಕೊಟ್ಟರು. ಮತ್ತೊಬ್ಬ ಧರ್ಮ ಗುರು ಮೌಲಾನ ಅಂಜದ್ ಅಹಮ್ಮದ್ ದಾನ-ಧರ್ಮದ ಬಗ್ಗೆ ಪ್ರವಚನ ನೀಡಿದರು.

ಪ್ರಾರ್ಥನೆ ನಂತರ ಪರಸ್ಪರ ಅಪ್ಪಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಈದ್ಗಾ ಮೈದಾನದ ಸಮೀಪವಿರುವ ಪೂರ್ವಿಕರ ಸಮಾದಿಗಳ ಬಳಿ ತೆರಳಿ ಪುಷ್ಪ ನಮನ ಸಲ್ಲಿಸಿದರು. ಅಗಲಿದವರಿಗೆ ಮುಕ್ತಿಗಾಗಿ ಅಲ್ಲಾಹನಲ್ಲಿ ಪ್ರಾರ್ಥಸಿದರು.