ಜಿಲ್ಲೆ

ಹಿಂದು ದೇವರ ಪೂಜೆಗೆ ಅಡ್ಡಿ ಆರೋಪ: ಮಂಡ್ಯದಲ್ಲಿ ಭಜರಂಗಸೇನೆ ನೇತೃತ್ವದಲ್ಲಿ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ನಗರದ ಹಾಲಹಳ್ಳಿ ಸ್ಲಂ ಬೋರ್ಡ್ ಬಡಾವಣೆಯ ದೇವಸ್ಥಾನದ ಮುಂಭಾಗದ ಮಸೀದಿ ಕಟ್ಟಲು ರಸ್ತೆಯನ್ನೇ ತೆರವುಗೊಳಿಸಿ ಹಿಂದು ದೇವರ ಪೂಜೆಗೆ ಅಡ್ಡಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಗುರುವಾರ ಭಜರಂಗಸೇನೆ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

ನಗರದ ಸರ್‌ಎಂವಿ ಪ್ರತಿಮೆ ಬಳಿ ಭಜರಂಗ ಸೇನೆ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು, ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಡಿಸಿಗೆ ಮನವಿ ಸಲ್ಲಿಸಿದರು. ಬಡಾವಣೆಯಲ್ಲಿ ದಲಿತ ಸಮುದಾಯದವರು ಪೂಜೆ ಮಾಡುವ ಕರುಮಾರಿಯಮ್ಮ ದೇವಸ್ಥಾನವಿದೆ. ಇದರ ಪಕ್ಕ ಮಸೀದಿ ಕಟ್ಟಲು ಜಾಗ ಖರೀದಿ ಮಾಡಿದ್ದು, ಆ ಸ್ಥಳಕ್ಕೆ ಹೋಗಲು ಖಾಸಗಿ ರಸ್ತೆ ಇದ್ದರೂ ಅಕ್ರಮವಾಗಿ ಸರ್ಕಾರಿ ಜಾಗದಲ್ಲಿ ದೇವಸ್ಥಾನದ ಮುಂಭಾಗದ ರಸ್ತೆ ಮಾಡಿಕೊಂಡು ಕಾಂಕ್ರೀಟ್ ಡಕ್ ಹಾಕಿಕೊಂಡಿದ್ದಾರೆ ಎಂದು ದೂರಿದರು.

ಹೊರಗಿನಿಂದ ಬರುವ ಕೆಲ ಪುಂಡರು ಅಲ್ಲಿನ ಹಿಂದು ನಿವಾಸಿಗಳಿಗೆ ಬೆದರಿಕೆ ಹಾಕುವುದು ಹಾಗೂ ಅನುಚಿತವಾಗಿ ವರ್ತಿಸುವುದನ್ನು ಮಾಡುತ್ತಿದ್ದಾರೆ. ಸ್ಲಂಬೋರ್ಡ್ ಆಸ್ತಿಯಲ್ಲಿ ಅಕ್ರಮ ರಸ್ತೆ ನಿರ್ಮಾಣ ಮಾಡಿದ್ದರ ಬಗ್ಗೆ ದೂರು ಕೊಟ್ಟರೂ ಸಹ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಆಗ ಅವರ ಧಾರ್ಮಿಕ ಕಾರ್ಯಕ್ರಮಗಳಿಗೆ ತೊಂದರೆಯಾಗುವ ಎಲ್ಲ ಸಾಧ್ಯತೆ ಇರುವುದರಿಂದ ಈಗಲೇ ಎಚ್ಚೆತ್ತುಕೊಳ್ಳಬೇಕು. ಅಕ್ರಮ ರಸ್ತೆಯನ್ನು ಮುಚ್ಚಿ ಸ್ಥಳೀಯರು ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಸೇನೆಯ ಜಿಲ್ಲಾಧ್ಯಕ್ಷ ವೈ.ಎಚ್.ಹರ್ಷ, ಮುಖಂಡರಾದ ವಸಂತ್, ವಿವೇಕ್, ಶಿವು, ಚಲುವರಾಜು, ಕೃಷ್ಣಶೆಟ್ಟಿ, ಜೆ.ಅನಿಲ್, ಅರ್ಜುನ್, ಸತೀಶ್‌ಕುಮಾರ್ ಇತರರಿದ್ದರು.