ಜಿಲ್ಲೆ

ಹಿಂದು ಮೇಲಿನ ದೌರ್ಜನ್ಯಕ್ಕೆ ಖಂಡನೆ: ನಗರದಲ್ಲಿ ಬಜರಂಗ ದಳ, ಹಿಂದು ಪರಿಷದ್ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ವಕ್ಫ್ ಕಾಯ್ದೆ ವಿರೋಧದ ಹೆಸರಿನಲ್ಲಿ ಪಶ್ಚಿಮ ಬಂಗಾಳದಲ್ಲಿ ಹಿಂದು ಸಮುದಾಯದ ಮೇಲೆ ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ಬಜರಂಗ ದಳ, ವಿಶ್ವ ಹಿಂದು ಪರಿಷದ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಸಂಘಟನೆಗಳ ಕಾರ್ಯಕರ್ತರು, ಘೋಷಣೆ ಕೂಗಿದರು. ಪಶ್ಚಿಮ ಬಂಗಾಳದಲ್ಲಿ ತಕ್ಷಣದಿಂದಲೇ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕೆಂದು ಆಗ್ರಹಿಸಿ ಜಿಲ್ಲಾಡಳಿತ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪಶ್ಚಿಮ ಬಂಗಾಳವನ್ನು ಹಿಂಸಾಚಾರದ ಅಗ್ನಿಯಲ್ಲಿ ಸುಟ್ಟು ಹಾಕಲಾಗುತ್ತಿದೆ. ಹಿಂದು ಸಮುದಾಯವರಿಗೆ ಕಿರುಕುಳ ನೀಡಲಾಗುತ್ತಿದೆ. ಹಿಂದು ಹಾಗೂ ರಾಷ್ಟ್ರ ವಿರೋಧಿ ಶಕ್ತಿಗಳಿಗೆ ತಮ್ಮ ಕುತಂತ್ರ ಯೋಜನೆಯನ್ನು ನಿಷ್ಕಂಟಕವಾಗಿ ನಿರ್ವಹಿಸಲು ಸಂಪೂರ್ಣ ಮುಕ್ತತೆ ನೀಡಲಾಗಿದೆ. ಪರಿಣಾಮ ಅಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿದೆ. ಮುರ್ಶಿದಾಬಾದ್‌ನಲ್ಲಿ ಆರಂಭವಾದ ಭೀಕರ ಹಿಂಸೆ ಇಡೀ ರಾಜ್ಯವನ್ನು ವ್ಯಾಪಿಸುತ್ತಿರುವಂತಿದೆ. ಆಡಳಿತ ವ್ಯವಸ್ಥೆ ದಂಧೆಕೋರರ ಎದುರು ನಿಷ್ಕ್ರಿಯವಾಗಿರುವುದಲ್ಲದೆ, ಕೆಲ ಕಡೆ ಅವರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು.

ಪರಿಸ್ಥಿತಿ ನಿಯಂತ್ರಣದಿಂದ ದೂರವಾಗುವ ಮೊದಲು ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳದಲ್ಲಿನ ಆಡಳಿತವನ್ನು ತೆಗೆದುಕೊಂಡು ಹಿಂದು ಹಾಗೂ ರಾಷ್ಟ್ರ ವಿರೋಧಿ ಶಕ್ತಿಗಳ ದುಷ್ಕ್ರತ್ಯಕ್ಕೆ ಕಠಿಣ ಶಿಕ್ಷೆ ನೀಡಬೇಕು. ಅಂತೆಯೇ ಪಶ್ಚಿಮ ಬಂಗಾಳದಲ್ಲಿನ ಹಿಂಸೆಗೆ ಸಂಬಂಧಿಸಿದಂತೆ ತನಿಖೆಯನ್ನು ಎನ್‌ಐಎ ಮೂಲಕ ಮಾಡಬೇಕು. ಮತ್ತು ಆರೋಪಿಗಳಿಗೆ ತಕ್ಷಣ ಶಿಕ್ಷೆ ನೀಡಬೇಕು. ಬಂಗಾಳದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕೇಂದ್ರದ ಭದ್ರತಾ ಪಡೆಗಳ ಕೈಗೆ ಒಪ್ಪಿಸಬೇಕು. ಎಎಫ್‌ಎಸ್‌ಪಿಎ ಕಾಯ್ದೆ ಜಾರಿಗೆ ತರಬೇಕು. ಬಾಂಗ್ಲಾದೇಶಿ ಮತ್ತು ರೊಹಿಂಗ್ಯಾ ಗೂಢಾಚಾರಿಗಳನ್ನು ಗುರುತಿಸಿ ಅವರನ್ನು ತಕ್ಷಣದ ದೇಶದಿಂದ ಹೊರಗೆ ಹಾಕಬೇಕು. ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದ 450 ಕಿ.ಮೀ ಗಡಿಯ ಮೇಲೆ ತಂತಿಬೇಲಿ ಹಾಕುವ ಕೆಲಸವನ್ನು ತಕ್ಷಣವೇ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ವಿಶ್ವ ಹಿಂದು ಪರಿಷದ್‌ನ ಸಹಕಾರ್ಯದರ್ಶಿ ಚಿಕ್ಕಬಳ್ಳಿ ಬಾಲು, ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಸಆದಿನಾರಾಯಣ್, ರವಿ, ಸಂತೋಷ್, ಪುನೀತ್, ವಿವೇಕ್, ಯಶ್ವಂತ್ ಇತರರಿದ್ದರು.