ಜಿಲ್ಲೆ

ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಯಬೇಕು ಮಕ್ಕಳ ವಿಜ್ಞಾನ ವಿಚಾರಗೋಷ್ಠಿಯಲ್ಲಿ ಜೇಮ್ಸ್ ಕುಟಿನ್ಹೋ ಅಭಿಮತ

ಹರೀಶ ಎಂ.

ಮಂಗಳೂರು: ಮಕ್ಕಳಲ್ಲಿರುವ ಪ್ರತಿಭೆ ಬೆಳಕಿಗೆ ಬರಬೇಕಾದರೆ ಅದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಬೇಕು. ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳಲ್ಲಿರುವ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಶಿಕ್ಷಕರ ಪಾತ್ರ ಮಹತ್ತರ. ಮಕ್ಕಳಲ್ಲಿರುವ ವೈಜ್ಞಾನಿಕ ಚಿಂತನೆ ಬೆಳೆದಾಗ ಆ ಮಗು ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಲು ಸಾಧ್ಯ ಎಂದು ಮಂಗಳೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನ್ಹೋ ಹೇಳಿದರು.


ಬಜಪೆ ಅನುದಾನಿತ ಹೋಲಿ ಫ್ಯಾಮಿಲಿ ಪ್ರೌಢಶಾಲೆಯಲ್ಲಿ ಜರಗಿದ ಮಂಗಳೂರು ತಾಲೂಕು ಉತ್ತರ ವಲಯ ಮಟ್ಟದ ಪ್ರೌಢಶಾಲಾ ಮಕ್ಕಳ ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಶಾಲಾ ಮುಖ್ಯ ಶಿಕ್ಷಕಿ ಜೆಸಿಂತಾ ವೇಗಸ್ ಉಪಸ್ಥಿತರಿದ್ದರು.


ತೀರ್ಪುಗಾರರಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕಿ ಸುಜಾತ, ಕಿಟ್ಟೆಲ್ ಮೆಮೊರಿಯಲ್ ಪ್ರೌಢಶಾಲೆ ಗೋರಿಗುಡ್ಡ ಇಲ್ಲಿಯ ವಿಜ್ಞಾನ ಶಿಕ್ಷಕ ರಘುನಾಥ್ ಭಟ್, ಕಾರ್ಮೆಲ್ ಕಾನ್ವೆಂಟ್ ಪ್ರೌಢಶಾಲೆ ಮೋಡಂಕಾಪು ಬಂಟ್ವಾಳ ಇಲ್ಲಿಯ ವಿಜ್ಞಾನ ಶಿಕ್ಷಕ ರೋಷನ್ ಪಿಂಟೋ ತೀರ್ಪುಗಾರರಾಗಿ ಸಹಕರಿಸಿದ್ದರು.


ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡ ವಿದ್ಯಾರ್ಥಿನಿ ಬಜ್ಪೆ ಅನುದಾನಿತ ಹೋಲಿ ಫ್ಯಾಮಿಲಿ ಪ್ರೌಢಶಾಲೆಯ ನಾಗರತ್ನ, ದ್ವಿತೀಯ ಸ್ಥಾನವನ್ನು ಸ್ವಂತ ಜೋಸೆಫರ ಪದವಿ ಪೂರ್ವ ಕಾಲೇಜು ಬಜಪೆಯ ಅಡ್ರಿಲ್ ಅನ್ ಸಿಕ್ವೇರ, ತೃತೀಯ ಸ್ಥಾನವನ್ನು ಸರ್ಕಾರಿ ಪ್ರೌಢಶಾಲೆ ಬೈಕಂಪಾಡಿ ಇಲ್ಲಿಯ ಪೂರ್ಣಿಮ ಹೆಚ್ ಪಡೆದರು. ಈ ಸ್ಪರ್ಧಾ ಕಾರ್ಯಕ್ರಮಕ್ಕೆ ವಿಜ್ಞಾನ ಶಿಕ್ಷಕರಾದ ರಮ್ಯ, ಶಿಲ್ಪಾ, ವೀಣಾ ಹಾಗೂ ಗಣಿತ ಶಿಕ್ಷಕಿ ದಿವ್ಯ ಲತಾ ಸಹಕರಿಸಿದ್ದರು.
ಶಾಲೆಯ ಗಣಿತ ಶಿಕ್ಷಕರಾದ ವಾಸುದೇವರಾವ್ ಕುಡುಪು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ವಿಜ್ಞಾನ ಶಿಕ್ಷಕಿ ಸಿಲ್ವಿಯಾ ವಂದಿಸಿದರು.