???????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

36.90 ಲಕ್ಷ ರೂ. ಉಳಿತಾಯ ಬಜೆಟ್ ; ಕುಣಿಗಲ್ ಪುರಸಭೆ ಆಯವ್ಯಯ ಮಂಡನೆ ; ಬಿಜೆಪಿ ಸದಸ್ಯರ ಸಭಾತ್ಯಾಗ

Tumakuru

ಕುಣಿಗಲ್ : ಬಿಜೆಪಿ ಸದಸ್ಯರ ಸಭಾತ್ಯಾಗದ ನಡುವೆ 2021-22ನೇ ಸಾಲಿನ 36.90 ಲಕ್ಷ ರೂಪಾಯಿ ಉಳಿತಾಯ ಬಜೆಟ್ ಅನ್ನು ಮಂಗಳವಾರ ಪುರಸಭೆ ಕಾರ್ಯಾಲಯದಲ್ಲಿ ಅಧ್ಯಕ್ಷ ಎಸ್.ಕೆ.ನಾಗೇಂದ್ರ ಅಧ್ಯಕ್ಷತೆಯಲ್ಲಿ ಮಂಡಿಸಲಾಯಿತು.

ಸರ್ಕಾರ ಸೇರಿ ವಿವಿಧ ಬಾಬುಗಳಿಂದ 18.47 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಿದ್ದು, ಈ ಪೈಕಿ 31.39 ಕೋಟಿ ರೂಪಾಯಿ ಪಟ್ಟಣದ ಅಭಿವೃದ್ಧಿಗಾಗಿ ವಿನಿಯೋಗಿಸಲು ತೀರ್ಮಾನಿಸಲಾಗಿದೆ.

ಆದಾಯ ಮೂಲಗಳು : ಸ್ವಯಂಘೋಷಿತ ಆಸ್ತಿ ತೆರಿಗೆಯಿಂದ 1.80 ಕೋಟಿ ರೂ., ನೀರು ಸರಬರಾಜು ಸಂಪರ್ಕದಿಂದ 66 ಲಕ್ಷ ರೂ., ಪುರಸಭೆ ಬಸ್ ನಿಲ್ದಾಣ ಸುಂಕ, ದಿನವಹಿ ನೆಲವಳಿ ಶುಲ್ಕ, ಸಂತೆ ನೆಲವಳಿ ಸುಂಕ, ಬೀದಿ ವ್ಯಾಪಾರಿಗಳ ನೋಂದಣಿ ಸುಂಕ 33.92 ಲಕ್ಷ ರೂ., ಪುರಸಭೆ ಸೇರಿದ ಅಂಗಡಿ ಮಳಿಗೆ, ಮಾರುಕಟ್ಟೆ ಮಳಿಗೆಗಳಿಂದ 30 ಲಕ್ಷ ರೂಪಾಯಿ, ಪುರಸಭೆ ಪರಿವೀಕ್ಷಣಾ ಶುಲ್ಕ, ಉದ್ದಿಮೆ ಪರವಾನಗಿ, ಖಾತಾ ನಕಲು, ಬದಲಾವಣೆ, ಇತರ ಫೀಗಳಿಂದ 85 ಲಕ್ಷ ರೂ., ರಾಜ್ಯ ಹಣಕಾಸು ಅಯೋಗದ ವೇತನ ಅನುದಾನ, ವಿದ್ಯುತ್ ವೆಚ್ಚ, ಕುಡಿಯುವ ನೀರು, ಅನುದಾನಗಳಿಗೆ ಸಂಬಂಧಿಸಿದಂತೆ 6 ಕೋಟಿ, 15ನೇ ಕೇಂದ್ರ ಹಣಕಾಸು ಯೋಜನೆಯಡಿಯಲ್ಲಿ 2 ಕೋಟಿ ರೂ., ಎಸ್.ಎಫ್.ಸಿ ವೇತನ ಅನುದಾನ 3 ಕೋಟಿ ರೂ., ಎಸ್.ಎಫ್.ಸಿ ವಿದ್ಯುತ್ ಅನುದಾನ 2 ಕೋಟಿ ರೂ., ಬ್ಯಾಂಕ್ ಬಡ್ಡಿ 80 ಲಕ್ಷ ರೂ. ಸೇರಿ ಇತರ ವಿವಿಧ ಮೂಲಗಳಿಂದ 18,47,97,000 ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ.

ಖರ್ಚಿನ ವಿವರ: ಪುರಸಭೆ ಸಿಬ್ಬಂದಿ ವೇತನಕ್ಕೆ 3 ಕೋಟಿ ರೂ., ಪುರಸಭೆ ವ್ಯಾಪ್ತಿಯ ಬೀದಿ ದೀಪ ಮತ್ತು ನೀರಿನ ಸರಬರಾಜು ವ್ಯವಸ್ಥೆ, ವಿದ್ಯುತ್ ವೆಚ್ಚಕ್ಕೆ 2 ಕೋಟಿ ರೂ., ಪುರಸಭೆ ಆಡಳಿತ ವೆಚ್ಚಕ್ಕೆ 1.80 ಕೋಟಿ ರೂ., ಘನತಾಜ್ಯ ವಸ್ತು ವಿಲೇವಾರಿ ನಿರ್ವಹಣೆಗೆ 1.5 ಕೋಟಿ ರೂ., ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದ ಅಭಿವೃದ್ದಿಗೆ 2 ಕೋಟಿ ರೂ., ಪುರಸಭೆ ನೀರು ಸರಬರಾಜು ನಿರ್ವಹಣೆಗೆ 50 ಲಕ್ಷ ರೂ., ಆಟೋ, ಟ್ಯಾಕ್ಸಿ ನಿಲ್ದಾಣ ಅಭಿವೃದ್ಧಿಗೆ 15 ಲಕ್ಷ ರೂ., ಪಟ್ಟಣದಲ್ಲಿ ಹೊಸದಾಗಿ ಬಸ್ ನಿಲ್ದಾಣ ಕಾಮಗಾರಿಗೆ 3 ಕೋಟಿ ರೂ., ಪುರಸಭೆ ಕಟ್ಟಡಗಳ ಅಭಿವೃದ್ಧಿ ಕಾಮಗಾರಿಗೆ 2.5 ಕೋಟಿ ರೂ., ಉದ್ಯಾನಗಳ ಅಭಿವೃದ್ಧಿಗೆ 65 ಲಕ್ಷ ರೂ., ಪ.ಜಾತಿ, ಪಂಗಡ, ಇತರ ಬಡ ಜನರ ಕಲ್ಯಾಣ ಅಭಿವೃದ್ಧಿ, ಅಂಗವಿಕಲರ ಶ್ರೇಯೋಭಿವೃದ್ಧಿ, ಶುದ್ಧಕುಡಿಯುವ ನೀರು ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ ಹಾಗೂ ಮೂಲಸೌಲಭ್ಯಕ್ಕೆ 43.20 ಲಕ್ಷ ರೂಪಾಯಿ ಸೇರಿ ಇತರ ಅಭಿವೃದ್ಧಿಗಾಗಿ 31,03,95,000 ರೂಪಾಯಿ ಮೀಸಲಿಡಲಾಗಿದೆ.

ಸ್ಟಡ್ ಫಾರ್ಮ್‌ಗೆ ಬೀಗ ಹಾಕಿ: 2019-20ನೇ ಸಾಲಿಗೆ ಕುಣಿಗಲ್ ಸ್ಟಡ್ ಾರ್ಮ್(ಕುದುರೆ ಲಾಯ)ದಿಂದ 1.59 ಕೋಟಿ ರೂ. ಕಂದಾಯ ಬಾಕಿ ಇದ್ದು, ಏಕೆ ವಸೂಲಿ ಮಾಡಿಲ್ಲ ಎಂದು ಕಂದಾಯ ಅಧಿಕಾರಿ ಜಗರೆಡ್ಡಿ ಅವರನ್ನು ತರಾಟೆ ತೆಗೆದುಕೊಂಡ ಸದಸ್ಯರಾದ ಬಿ.ಎನ್.ಅರುಣ್‌ಕುಮಾರ್, ಕೋಟೆ ನಾಗಣ್ಣ, ಕೆ.ಎಸ್.ಕೃಷ್ಣ, ಬಡವರು ಕಂದಾಯ ಕಟ್ಟಲಿಲ್ಲ ಎಂದರೇ ಟಾಮ್, ಟಾಮ್ ಹೊಡೆದು ಹಣ ವಸೂಲಿ ಮಾಡುತ್ತೀರಿ, ಬಡವರಿಗೆ ಒಂದು ನ್ಯಾಯ ಶ್ರೀಮಂತರಿಗೆ ಒಂದು ನ್ಯಾಯನಾ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿ, 2021-22 ನೇ ಸಾಲಿಗೆ ಸ್ಟಡ್ ಾರ್ಮ್ ಗುತ್ತಿಗೆ ಅವಧಿ ಮುಗಿಯಲಿದೆ, ಯಾರಿಂದ ಬಾಕಿ ವಸೂಲಿ ಮಾಡುತ್ತೀರಿ. ಹಾಗಾಗಿ ಬೀಗ ಹಾಕಿ ಬಾಕಿ ಕಂದಾಯದ ಹಣ ವಸೂಲಿ ಮಾಡಬೇಕೆಂದು ತಾಕೀತು ಪಡಿಸಿದರು.

ಸಭಾ ತ್ಯಾಗ: ಬಜೆಟ್ ಮಂಡನೆ ಮುನ್ನ ಪೂರ್ವಭಾವಿ ಸಭೆ ನಡೆಸದೇ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಕೃಷ್ಣ ಇದು ನಮಗೆ ಒಪ್ಪಿಗೆ ಇಲ್ಲ ಎಂದು ಸಭೆಯಿಂದ ಹೊರ ನಡೆದರು. ಬಿಜೆಪಿಯ ಇತರ ಸದಸ್ಯರು ಅವರನ್ನು ಹಿಂಬಾಲಿಸಿದರು. ಆದರೆ ಕಾಂಗ್ರೆಸ್ ಅತ್ಯಧಿಕ ಬಹುಮತ ಇದ್ದ ಕಾರಣ ಬಜೆಟ್ ಮಂಡನೆಯಾಯಿತು.

2021-22ನೇ ಸಾಲಿನ ಬಜೆಟ್ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ. ಇದೊಂದು ಜನಪ್ರಿಯ ಬಜೆಟ್ ಆಗಿದೆ. ಆದರೆ ಯಾವುದೋ ಒಂದು ಕಾರಣ ಇಟ್ಟುಕೊಂಡು ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ್ದು ವಿಷಾದನೀಯ. ಎಸ್.ಕೆ.ನಾಗೇಂದ್ರ, ಪುರಸಭೆ ಅಧ್ಯಕ್ಷ