ದೊಡ್ಡಬಳ್ಳಾಪುರ : ಚಿತ್ರನಟ ಪ್ರಥಮ್ಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಬೇಕರಿ ರು, ಯಶಸ್ವಿನಿಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಮತ್ತೊಂದೆಡೆ ದೂರುದಾರ ಪ್ರಥಮ್ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಸಾದಿಕ್ ಪಾಷಾ ಎದುರು ವಿಚಾರಣೆಗೆ ಹಾಜರಾಗಿದ್ದು, ಹಲ್ಲೆ ಯತ್ನದ ಸ್ಥಳದ ಮಹಜರು ಮಾಡಲಾಗಿದೆ.
ಜುಲೈ 22ರಂದು ಪ್ರಥಮ್ ದೊಡ್ಡಬಳ್ಳಾಪುರ ತಾಲೂಕಿನ ರಾಮಯ್ಯನಪಾಳ್ಯದ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆ ಆಗಮಿಸಿದ್ದರು, ಈ ವೇಳೆ ದೇವಸ್ಥಾನಕ್ಕೆ ಬಂದಿದ್ದ ಯಶಸ್ವಿನಿ ಮತ್ತು ಬೇಕರಿ ರು ಮಾರಾಕಾಸ್ತ$ಗಳನ್ನು ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರಥಮ್ ದೂರು ದಾಖಲು ಮಾಡಿದ್ದರು. ಜು.29ರಂದು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜೀವ ಬೆದರಿಕೆ ಪ್ರಕರಣ ಹಿನ್ನೆಲೆಯಲ್ಲಿ ಆರೋಪಿಗಳಾದ ಯಶಸ್ವಿನಿ, ಬೇಕರಿ ರು ದೊಡ್ಡಬಳ್ಳಾಪುರದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ, ತಲಾ 10 ಸಾವಿರ ನಗದು ಶ್ಯೂರಿಟಿ ಮತ್ತು ತನಿಖೆಗೆ ಸಹಕರಿಸುವಂತೆ ಷರತ್ತು ವಿಧಿಸಿದ್ದಾರೆ. ವಿಚಾರಣೆಗೆ ಬರುವಂತೆ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ದೂರುದಾರ ಪ್ರಥಮ್ಗೆ ನೋಟಿಸ್ ನೀಡಿದ್ದರು, ಗುರುವಾರ ಪ್ರಥಮ್ ವಿಚಾರಣೆಗೆ ಹಾಜರಾದರು, ಸ್ಥಳ ಮಹಜರ್ಗಾಗಿ ರಾಮಯ್ಯನಪಾಳ್ಯದ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಪ್ರಥಮ್ ಅವರನ್ನು ಪೊಲೀಸರು ಕರೆದುಕೊಂಡು ಹೋಗಿ ಮಹಜರು ಮಾಡಿದ್ದಾರೆ.
ಪ್ರಥಮ್ಗೆ ಮಸಿ ಬಳಿಯಲು ಯತ್ನ! : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿಚಾರವಾಗಿ ವ್ಯಂಗ್ಯವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಪ್ರಥಮ್ಗೆ ಅಂಬೇಡ್ಕರ್ ಸೇನೆ ಹೋರಾಟಗಾರರು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಎದುರು ಮಸಿ ಬಳಿಯುವ ಯತ್ನ ನಡೆಸಿದರು. ಪ್ರಥಮ್ ಮಾತಿನ ಭರದಲ್ಲಿ ಅಂಬೇಡ್ಕರ್ ಬಗ್ಗೆ ಮಾತನಾಡಿದ್ದರು ಎಂದು ಆರೋಪಿಸಿ ಮಸಿ ಬಳಿಯಲು ಯತ್ನ ಮಾಡಲಾಗಿದೆ. ಪ್ರಥಮ್ ಗ್ರಾಮಾಂತರ ಠಾಣೆಯಲ್ಲಿ ವಿಚಾರಣೆ ಮುಗಿಸಿ ವಾಪಸ್ ಹೊರಡುವಾಗ ಮಸಿ ಬಳಿಯಲು ದಲಿತ ಮುಖಂಡರು ಮುಂದಾದಾಗ ಪೊಲೀಸರು ತಡೆದರು.