ನಿಮಿಲ್ ಆರ್.ಕೆ. 
ಜಿಲ್ಲೆ

ಬೈಕಂಪಾಡಿ ಚಿನ್ನಾಭರಣ ವ್ಯಾಪಾರಿ ದರೋಡೆ ಮೂವರು ಆರೋಪಿಗಳ ಬಂಧನ

ಹರೀಶ ಎಂ.
ಮಂಗಳೂರು: ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಜೂನ್ 29ರಂದು ಬೆಳಗ್ಗಿನ ಜಾವ ನಡೆದಿದ್ದ ಕೇರಳದ ಚಿನ್ನಾಭರಣ ಮಳಿಗೆ ವ್ಯಾಪಾರಿಯ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಕೃತ್ಯಕ್ಕೆ ಸಹಕರಿಸಿದ ಮೂವರು ಆರೋಪಿಗಳನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕಣ್ಣೂರು ತಲಶ್ಚೇರಿ ತಾಲೂಕಿನ ಪತಿರಿಯಾಡ್ ಗ್ರಾಮದ ಕಾಯಲೋಡೆ ನಿವಾಸಿ ನಿಮಿಲ್ ಆರ್.ಕೆ. (37), ಕೊಡಗು ಜಿಲ್ಲೆಯ ಮಡಿಕೇರಿ ಹಕ್ಕತ್ತೂರು ತೊಬ್ಬಟ್ಟು ನಿವಾಸಿ ಇರ್ಷಾದ್(40 ) ಹಾಗೂ ಮಡಿಕೇರಿ ಮಾರುಕಟ್ಟೆ ಸ್ಟುಡಿಯೋ ಬಳಿಯ ನಿವಾಸಿ ಮುಸ್ತಫಾ (49) ಬಂಧಿತರು.
ನಿಮಿಲ್ ಆರ್.ಕೆ. ಎಂಬಾತನನ್ನು ಪಣಂಬೂರು ಠಾಣೆಯ ಪೊಲೀಸ್ ನಿರೀಕ್ಷಕ ಸಲೀಂ ಅಬ್ಬಾಸ್ ಅವರು ಸಿಬ್ಬಂದಿಗಳ ಸಹಾಯದಿಂದ ಕಣ್ಣೂರು ಜಿಲ್ಲೆಯ ಚಾಲ ಎಂಬಲ್ಲಿರುವ ಆಸ್ಪತ್ರೆಯ ಬಳಿಯಿಂದ ವಶಕ್ಕೆ ಪಡೆದಿದ್ದಾರೆ. ಪಣಂಬೂರು ಠಾಣಾ ಪಿ.ಎಸ್.ಐ ಜ್ಞಾನ ಶೇಖರ ಅವರು ಸಿಬ್ಬಂದಿಗಳೊಂದಿಗೆ ಗುರುವಾರ ಕಾರ್ಯಾಚರಣೆ ನಡೆಸಿದಾಗ ಆರೋಪಿತರಿಗೆ ಕೃತ್ಯ ಎಸಗಲು ಸಹಕರಿಸಿ ಆಶ್ರಯ ನೀಡಿದದ ಇರ್ಷಾದ್ ನನ್ನು ಕೊಡಗು ಜಿಲ್ಲೆಯ ಪೊನ್ನಂ ಪೇಟೆಯಲ್ಲಿ ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಸಹಕರಿಸಿ ಪ್ರಮುಖ ಆರೋಪಿತರಿಗೆ ಕಾರನ್ನು ಒದಗಿಸಿಕೊಟ್ಟು ಆಶ್ರಯ ನೀಡಿದ ಇನ್ನೊರ್ವ ಆರೋಪಿತ ಮುಸ್ತಾಫನನ್ನು ಮಡಿಕೇರಿ ತಾಲೂಕು ಮೂರ್ನಾಡು ಜಂಕ್ಷನ್ ನಲ್ಲಿರುವ ಲಯನ್ಸ್ ಕ್ಲಬ್ ಬಳಿಯ ಬಸ್ಸು ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಹಿನ್ನೆಲೆ: ಜೂನ್ 29ರಂದು ನಸುಕಿನ ಸುಮಾರು 2.45 ಗಂಟೆಗೆ ಮಹಾರಾಷ್ಟ್ರದಿಂದ ಕೇರಳದ ಪಯ್ಯನ್ನೂರಿಗೆ ಪತ್ನಿ ಹಾಗೂ ಮಗನೊಂದಿಗೆ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವಿಕಾಸ್ ಸುಬ್ಬರಾವ್ ಧನವಡೆ (44) ಅವರ ಕಾರನ್ನು ಬೈಕಂಪಾಡಿ ಸಮೀಪ ಎರಡು ಇನ್ನೋವಾ ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಬಂದ 6-7 ಮಂದಿ ಮುಸುಕುಧಾರಿಗಳು ಅಡ್ಡಗಟ್ಟಿದ್ದರು.
ಆರೋಪಿಗಳು ತಲವಾರು ತೋರಿಸಿ ಬೆದರಿಕೆ ಹಾಕಿ ದೂರುದಾರರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದು, ಪತ್ನಿ ಹಾಗೂ ಮಗನನ್ನು ಬಲವಂತವಾಗಿ ಅಪಹರಿಸಿ ಕೆಲ ಕಿಲೋಮೀಟರ್ ದೂರದಲ್ಲಿ ಬಿಟ್ಟು, ದೂರುದಾರರ ಕಾರು, ಕಾರಿನಲ್ಲಿದ್ದ ಸುಮಾರು 180 ಗ್ರಾಂ ಚಿನ್ನಾಭರಣ (ಅಂದಾಜು 20 ಲಕ್ಷ ರೂ. ಮೌಲ್ಯ), ಎರಡು ಮೊಬೈಲ್ ಫೋನ್‌ಗಳು ಹಾಗೂ ಕಾರು ಸೇರಿದಂತೆ ಒಟ್ಟು 23.10 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು.
ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 84/2026ರಡಿ ಭಾರತೀಯ ನ್ಯಾಯ ಸಂಹಿತೆ-2023ರ ವಿವಿಧ ಕಲಂಗಳು ಹಾಗೂ ಬಿಎನ್‌ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪ್ರಕರಣದ ತನಿಖೆ ವೇಳೆ ಜೂನ್ 30ರಂದು ಬೆಳಗ್ಗೆ ಬಂಟ್ವಾಳ ತಾಲೂಕಿನ ಪಚ್ಚಿನಡ್ಕದ ಗುಡ್ಡ ಪ್ರದೇಶದಲ್ಲಿ ಆರೋಪಿಗಳು ನಂಬರ್ ಪ್ಲೇಟ್ ತೆಗೆದು ಬಿಟ್ಟು ಹೋಗಿದ್ದ ದೂರುದಾರರ ಮಾರುತಿ ಡಿಜೈರ್ ಕಾರನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
16 ಮಂದಿ ಭಾಗಿ
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಪ್ರಕರಣದಲ್ಲಿ ಒಟ್ಟು 16 ಮಂದಿ ಭಾಗಿಯಾಗಿದ್ದು, ಅವರಲ್ಲಿ 14 ಮಂದಿ ನೇರವಾಗಿ ದರೋಡೆಯಲ್ಲಿ ಭಾಗವಹಿಸಿದ್ದರೆ, ಇಬ್ಬರು ಆರೋಪಿಗಳಿಗೆ ಸಹಕಾರ ಹಾಗೂ ಆಶ್ರಯ ನೀಡಿರುವುದು ಬೆಳಕಿಗೆ ಬಂದಿದೆ. ಇದುವರೆಗೆ ಮೂವರು ಆರೋಪಿಗಳನ್ನು ಬಂಧಿಸಿ ಜುಲೈ 3ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳು ಸೇರಿದಂತೆ ಇನ್ನೂ 13 ಮಂದಿ ಆರೋಪಿಗಳ ಬಂಧನ ಬಾಕಿಯಿದೆ.
ದರೋಡೆಗೀಡಾದ ಮಾರುತಿ ಡಿಜೈರ್ ಕಾರು ಹಾಗೂ ಕೃತ್ಯಕ್ಕೆ ಬಳಸಿದ್ದ ನಾಲ್ಕು ಕಾರುಗಳ ಪೈಕಿ ಒಂದು ಇನ್ನೋವಾ ಕ್ರಿಸ್ಟಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉಳಿದ ಮೂರು ಕಾರುಗಳು, ದರೋಡೆಗೀಡಾದ 180 ಗ್ರಾಂ ಚಿನ್ನಾಭರಣ ಹಾಗೂ ಎರಡು ಮೊಬೈಲ್ ಫೋನ್‌ಗಳ ಪತ್ತೆ ಕಾರ್ಯ ಮುಂದುವರಿದಿದೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಕೊಡಗು ಜಿಲ್ಲೆ ಹಾಗೂ ಕೇರಳ ರಾಜ್ಯದ ನಿವಾಸಿಗಳಾಗಿರುವುದು ತಿಳಿದುಬಂದಿದೆ.
ಉತ್ತರ ವಿಭಾಗದ ಎಸಿಪಿ ಶ್ರೀಕಾಂತ ಕೆ. ಹಾಗೂ ಮಂಗಳೂರು ನಗರ ಸಿಸಿಬಿ ಎಸಿಪಿ ಮನೋಜ್ ಕುಮಾರ್ ನಾಯ್ಕ ಅವರ ಮಾರ್ಗದರ್ಶನದಲ್ಲಿ ಪಣಂಬೂರು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸಲೀಂ ಅಬ್ಬಾಸ್, ಪಿಎಸ್‌ಐಗಳಾದ ಶ್ರೀಕಲಾ ಕೆ.ಟಿ., ಜ್ಞಾನಶೇಖರ ಹಾಗೂ ಕಾವೂರು, ಮೂಲ್ಕಿ, ಕಂಕನಾಡಿ ಹಾಗೂ ಉರ್ವ ಪೊಲೀಸ್ ಠಾಣೆಗಳ ಮತ್ತು ಸಿಸಿಬಿ ಪಿಎಸ್‌ಐ ಹಾಗೂ ಸಿಬ್ಬಂದಿ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.