ವಿಜಯವಾಣಿ ಸುದ್ದಿಜಾಲ ಹೆಬ್ರಿ
ಹೆಬ್ರಿ ತಾಲೂಕಿನಲ್ಲಿ ಮಳೆಯಿಂದಾಗಿ ಕಟಾವು ಮಾಡಿ ಗದ್ದೆಯಲ್ಲಿದ್ದ ಬೈಹುಲ್ಲು ಮಳೆಯಿಂದ ಸಂಪೂರ್ಣ ಒದ್ದೆಯಾಗಿ ರೈತರಿಗೆ ಸಿಗದಂತಾಗಿದೆ.
ಅಕಾಲಿಕ ಮಳೆಯಿಂದಾಗಿ ಈ ವರ್ಷ ಕೃಷಿಗೆ ಬಾರಿ ಪ್ರಮಾಣದ ಹಾನಿ ಉಂಟಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಅನೇಕರ ಗದ್ದೆಯಲ್ಲಿ ಪೈರು ಸಿಗದಷ್ಟು ಅವ್ಯವವಸ್ಥೆ ಉಂಟಾಗಿತ್ತು. ನಂತರ ಆಗಾಗ ಮಳೆ ಬರುತ್ತಿರುವುದರಿಂದ ಸಣ್ಣ ಪ್ರಮಾಣದ ಹುಲ್ಲು ದೊರಕದಂತಾಗಿದೆ.
ಬಹುತೇಕ ಕಡೆಯಲ್ಲಿ ಯಂತ್ರದ ಲಭ್ಯತೆ ಇಲ್ಲದಿರುವುದರಿಂದ ಕಟಾವು ಆಗಿಲ್ಲ. ಹಣ್ಣಾಗಿದ್ದ ಭತ್ತಗಳು ಬಾರಿ ಗಾಳಿ ಮಳೆ ಬೀಸುತ್ತಿರುವಾಗ ಉದುರುತ್ತವೆ. ಇದರಿಂದಾಗಿ ರೈತನಿಗೆ ನಷ್ಟ ಉಂಟಾಗುತ್ತದೆ. ಕೆಲವರು ಯಂತ್ರಗಳಿಗೆ ಕಾದು ಜನರನ್ನು ಸೇರಿಸಿ ಕಟಾವು ಮಾಡುತ್ತಿದ್ದಾರೆ.
ಈ ವರ್ಷ ಬಯಲು ಗದ್ದೆಯಲ್ಲಿ ಭತ್ತದ ಕೃಷಿ ಮಾಡಿದವರು ಹುಲ್ಲಿನ ಆಸೆ ಬಿಟ್ಟಿದ್ದಾರೆ. ದೀಪಾವಳಿಯ ಮೊದಲು ಬಾರಿ ಮಳೆಯಿಂದಾಗಿ ಗದ್ದೆಯಲ್ಲಿ ನೀರಿನ ಶೇಖರಣೆಯಾಗಿದೆ. ನೀರು ಇರುವುದರಿಂದ ಕಟಾವು ಯಂತ್ರ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.
ಬಹುತೇಕರು ತಮ್ಮ ಗದ್ದೆಯಲ್ಲಿ ಬೆಳೆದ ಬೇಸಾಯದ ಮೂಲಕ ದನಕರುಗಳಿಗೆ ಹುಲ್ಲು ಒಂದಿಸುತ್ತಿದ್ದರು. ಈ ವರ್ಷ ಬೇರೆ ಕಡೆಯಿಂದ ಹುಲ್ಲು ತಂದು ಪೋಷಿಸುವ ಜವಾಬ್ದಾರಿ ರೈತರ ಮೇಲಿದೆ. ಹುಲ್ಲಿಗೆ ವ್ಯಾಪಕ ಬೇಡಿಕೆ ಇರುವುದರಿಂದ ದರದಲ್ಲಿ ಅಗಾಧ ವ್ಯತ್ಯಾಸ ಕಾಣಬಹುದು.
ಇಲಾಖೆ ವತಿಯಿಂದ ಹುಲ್ಲು ಹಾಳಾದರೆ ಯಾವುದೇ ಪರಿಹಾರ ನೀಡಲು ಅವಕಾಶ ಇಲ್ಲ. ಅಕಾಲಿಕ ಮಳೆಯಿಂದ ಈ ವರ್ಷ ಭತ್ತದ ಬೇಸಾಯ ಮಾಡಿದವರಿಗೆ ತೊಂದರೆಯಾಗಿದೆ. ರೈತರು ಎದೆಗುಂದದೇ ಸುಗ್ಗಿ ಬೆಳೆಯಲ್ಲಿ ಲಾಭ ಪಡೆಯಲು ಪ್ರಯತ್ನಿಸಬೇಕು. -ಗೋವಿಂದ ನಾಯ್ಕ, ಸಹಾಯಕ ಕೃಷಿ ನಿರ್ದೇಶಕ ಕಾರ್ಕಳ ಅಕಾಲಿಕ ಮಳೆಯಿಂದ ಹುಲ್ಲು ಸಂಪೂರ್ಣ ನಾಶವಾಗಿದೆ. ಮೊನ್ನೆ ಸುರಿದ ಮಳೆಯಿಂದ ನಮ್ಮ ಬಯಲು ಗದ್ದೆಯಲ್ಲಿ ಪೂರ್ತಿ ನೀರು ನಿಂತು ಪೈರಿಗೆ ಹಾನಿಯಾಗಿತ್ತು. ಈಗ ನೋಡಿದರೆ ಹುಲ್ಲು ಸಿಗದ ಸನ್ನಿವೇಶ ಇದೆ. -ಸುರೇಶ, ರೈತ ಹೆಬ್ರಿ https://www.vijayavani.net/struggle-led-by-self-respecting-cooperatives https://www.vijayavani.net/you-can-become-a-success-by-overcoming-obstacles