ಮೈಸೂರು: ರಂಗಾಯಣದ ಅಂಗಳದಲ್ಲಿ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2024’ ಮಾ.7ರಿಂದ ಅಧಿಕೃತವಾಗಿ ತೆರೆದುಕೊಳ್ಳುವ ಮೂಲಕ ಕಲಾ ರಸ ಹಂಚಲಿದೆ.
‘ಇವ ನಮ್ಮವ ಇವ ನಮ್ಮವ’ ಪರಿಕಲ್ಪನೆಯಡಿ ನಾಟಕ, ಚಲನಚಿತ್ರೋತ್ಸವ, ಪುಸ್ತಕ ಮೇಳ, ಕರಕುಶಕಲ ಮೇಳ ಮತ್ತು ಪ್ರಾತ್ಯಕ್ಷಿಕೆ, ದೇಸಿ ಆಹಾರ ಮೇಳ, ಚಿತ್ರಕಲಾ ಪ್ರದರ್ಶನ, ಚಾರಿತ್ರಿಕ ದಾಖಲೆಗಳ ಪ್ರದರ್ಶನ, ವಚನಾಂತರಂಗ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ.
ಜನಪದ ಸಂಭ್ರಮಕ್ಕೆ ಬುಧವಾರ ಚಾಲನೆ ದೊರೆತಿದ್ದು, ರಂಗಾಯಣ ಅಂಗಳದಲ್ಲಿ ಈಗಾಗಲೇ ಜನಪದ ಸಂಭ್ರಮ ಕಳೆಗಟ್ಟಿದೆ. ಬಹುರೂಪಿ ನಾಟಕೋತ್ಸವವನ್ನು ಮಾ.7ರ ಸಂಜೆ 4.30ಕ್ಕೆ ವನರಂಗದಲ್ಲಿ ಸಾಹಿತಿ ಜಯಂತ ಕಾಯ್ಕಿಣಿ ಉದ್ಘಾಟಿಸುವರು. ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಶಿವರಾಜ್ ಎಸ್. ತಂಗಡಗಿ, ಸಂಸದ ಪ್ರತಾಪ್ ಸಿಂಹ, ಶಾಸಕ ಕೆ. ಹರೀಶ್‌ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಭಾಗವಹಿಸುವರು.
ಇದಕ್ಕೂ ಮುನ್ನ ಬೆಳಗ್ಗೆ 10.30ಕ್ಕೆ ಶ್ರೀರಂಗದಲ್ಲಿ ಚಲನಚಿತ್ರೋತ್ಸವವನ್ನು ವನ್ಯಜೀವಿ ಛಾಯಾಗ್ರಾಹಕ ಡಾ. ಲೋಕೇಶ್ ಮೊಸಳೆ ಉದ್ಘಾಟಿಸುವರು. ಚಲನಚಿತ್ರೋತ್ಸವಕ್ಕೆ ಶ್ರೀರಂಗ ಹಾಗೂ ನಾಟಕ ಪ್ರದರ್ಶನಕ್ಕೆ ವನರಂಗ, ಕಿರುರಂಗಮಂದಿರ, ಭೂಮಿಗೀತ, ಕಲಾಮಂದಿರ ವೇದಿಕೆಗಳನ್ನು ಸಿದ್ಧ ಮಾಡಲಾಗಿದೆ.