ಮೈಸೂರು: ರಂಗಾಯಣ ಆಯೋಜಿಸಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಮೂರನೇ ದಿನವಾದ ಗುರುವಾರ ಸಹ ಅಪಾರ ಸಂಖ್ಯೆ ಯಲ್ಲಿ ರಂಗಾಸಕ್ತರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.
ಭೂಮಿಗೀತ, ಕಿರುರಂಗಮಂದಿರ, ಕಲಾಮಂದಿರ ಹಾಗೂ ವನರಂಗದಲ್ಲಿ ಆಯೋಜಿಸಿದ್ದ ನಾಟಕವನ್ನು ರಂಗಾಸಕ್ತರು ಆಸಕ್ತಿಯಿಂದ ವೀಕ್ಷಿಸಿದರು. ಕಲಾಮಂದಿರದಲ್ಲಿ ಕೇರಳದ ಕೊಚ್ಚಿಯ ಲೋಕಧರ್ಮಿ ತಂಡದಿಂದ ಡಾ.ಚಂದ್ರದಾಸನ್ ನಿರ್ದೇಶನದ ದ ಬೋಟ್ ಬಾಯ್ ಮಲಯಾಳಂ ನಾಟಕ ಪ್ರದರ್ಶನಗೊಂಡಿತು. ಅದೇ ರೀತಿ ವನರಂಗದಲ್ಲಿ ಕುಂದಾಪುರದ ತೆಕ್ಕಟ್ಟೆ ಯಶಸ್ವಿ ಕಲಾವೃಂದದಿಂದ ಮಕ್ಕಳ ಮೇಳ ತಂಡದಿಂದ ಕೃಷ್ಣಾರ್ಜುನ ಕಾಳಗ ನಡೆಯಿತು. ಭೂಮಿಗೀತದಲ್ಲಿ ಪಾಂಡಿಚೇರಿಯ ಆದಿಶಕ್ತಿ ಥಿಯೇಟರ್ ತಂಡದಿಂದ ನಿಮ್ಮಿ ರಾಫೆಲ್ ನಿರ್ದೇಶನದ ಊರ್ಮಿಳಾ ಇಂಗ್ಲಿಷ್ ನಾಟಕ ಹಾಗೂ ಕಿರುರಂಗಮಂದಿರದಲ್ಲಿ ಪಾಂಡಿಚೇರಿಯ ವೆಲಿಪ್ಪಡೈ ಥಿಯೇಟರ್ ಮೂವ್‌ಮೆಂಟ್ ತಂಡದಿಂದ ಎಸ್.ರಾಮಸ್ವಾಮಿ ನಿರ್ದೇಶನದ ನಡಾಪಾವೈ ತಮಿಳು ನಾಟಕ ಪ್ರದರ್ಶನಗೊಂಡಿತು. ಶ್ರೀರಂಗದಲ್ಲಿ ಬೆಳಗ್ಗೆ ಆಯೋಜಿಸಿದ್ದ ಚಲನಚಿತ್ರ ಪ್ರದರ್ಶನ ಜನಾಕರ್ಷಿಸಿತು.
ಕಿಂದರಿಜೋಗಿ ಆವರಣದಲ್ಲಿ ಸಂಜೆ ಆಯೋಜಿಸಿದ್ದ ಜನಪದೋತ್ಸವದಲ್ಲಿ ನಗರದ ಯದುಕುಮಾರ್ ತಂಡದ ಸ್ಯಾಕ್ಸೋಪೋನ್ ವಾದನ ಮುದ ನೀಡಿತು. ‘ಸೋಜುಗಾದ ಸೂಜು ಮಲ್ಲಿಗೆ..’, ‘ಕೋಡಗಾನ ಕೋಳಿ ನುಂಗಿತ್ತಾ..’, ‘ಐಗಿರಿ ನಂದಿನಿ ನಂದಿತ ಮೇದಿನಿ..’ ಮುಂತಾದ ಹಾಡುಗಳನ್ನು ಸ್ಯಾಕ್ಸೋಪೋನ್ ಮೂಲಕ ನುಡಿಸಿ ರಂಜಿಸಿದರು. ಇದಾದ ನಂತರ ಛತ್ತೀಸ್‌ಗಢ ತಂಡದ ಸಾಂಪ್ರದಾಯಿಕ ನೃತ್ಯ ಕಣ್ಮನ ಸೆಳೆಯಿತು.