ಕಡೂರು: ಗ್ರಾಪಂ ವ್ಯಾಪ್ತಿಯಲ್ಲಿ ಆರೋಗ್ಯಕರ ಸಮಾಜ ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸುವ ಮಹಿಳೆಯರಿಗೆ ಗ್ರಾಪಂನಿಂದ ಬಾಗಿನ ಅರ್ಪಿಸುವ ಮೂಲಕ ಗೌರವ ಸೂಚಿಸಲಾಗುತ್ತಿದೆ ಎಂದು ಚಿಕ್ಕಿಂಗಳ ಗ್ರಾಪಂ ಅಧ್ಯಕ್ಷ ಪ್ರಕಾಶ್‌ನಾಯ್ಕ ತಿಳಿಸಿದರು.
ತಾಲೂಕಿನ ಚಿಕ್ಕಂಗಳ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ 35ಕ್ಕೂ ಹೆಚ್ಚು ಮಹಿಳೆಯರಿಗೆ ಗ್ರಾಪಂ ಕಚೇರಿಯಲ್ಲಿ ಬಾಗಿನ ಅರ್ಪಿಸಿ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವ ಸಹೋದರಿಯರನ್ನು ಗುರುತಿಸಿ ನಾವೆಲ್ಲರೂ ಒಂದು ಕುಟುಂಬ ಎಂಬ ಭಾವನೆಯಿಂದ ತಾಯಿ ಪ್ರೀತಿ, ವಾತ್ಸಲ್ಯವನ್ನು ನೀಡುವ ಮೂಲಕ ಬಾಗಿನ ನೀಡುವ ಸಂಪ್ರದಾಯಕ್ಕೆ ಚಾಲನೆ ನೀಡಲಾಗಿದೆ ಎಂದರು.
ಇದು ಯಾವುದೇ ರಾಜಕೀಯ ಪ್ರೇರಿತ ಅಲ್ಲ . ನಾನು ಅಧ್ಯಕ್ಷರಾದ ಮೇಲೆ ಗ್ರಾಮದಲ್ಲಿನ ಮಹಿಳೆಯರಿಗೆ ಗೌರವ ನೀಡಲು ಗೌರಿ ಹಬ್ಬದ ನೆನಪಿಗಾಗಿ ಸಹೋದರಿಯರ ಆಶೀರ್ವಾದ ಪಡೆಯಲು ಬಯಸಿದ್ದು ಇಂದು ನೆರವೇರಿಸಲಾಗಿದೆ. ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸಹಾಯಕಿಯರು, ಬ್ಯಾಂಕ್‌ಸಿಬ್ಬಂದಿ, ಶಿಕ್ಷಕಿಯರು ಸೇರಿದಂತೆ 35ಕ್ಕೂ ಹೆಚ್ಚಿನ ಮಹಿಳೆಯರಿಗೆ ಅರಿಶಿನ, ಕುಂಕುಮ, ಹೂ, ಹಣ್ಣು, ಸೀರೆ, ಬಳೆಗಳು ಸೇರಿದಂತೆ ಬಾಗಿನ ನೀಡಿ ಸಹೋದರತ್ವ ಭಾವನೆಗೆ ಸಾಕ್ಷಿಯಾದರು.
ಗ್ರಾಪಂ ಉಪಾಧ್ಯಕ್ಷೆ ಜಯ ಬಾಯಿ, ಸದಸ್ಯರಾದ ಷಡಾಕ್ಷರಿ, ಸುನೀತಾ, ಮಂಜುಳಾ ಬಾಯಿ, ಲತಾ ಹರೀಶ್, ಪಿಡಿಒ ಚಂದ್ರಪ್ಪ, ಮುಖ್ಯಶಿಕ್ಷಕಿ ಲೀಲಾಬಾಯಿ, ಕವಿತಾ ಆನಂದ್, ರಾಜೇಶ್ವರಿ, ಗೌರಮ್ಮ, ದೇವಕಿ, ದಿವ್ಯಾಬಾಯಿ, ಸೌಭಾಗ್ಯ, ಚಂದ್ರಿಕಾ, ಪೂಜಾ, ಕುಮಾರಿ, ಕವಿತಾ, ಸುನಿತಾ, ಅಂಬಿಕ, ಪ್ರೇಮಾ ಬಾಗಿನ ಪಡೆದರು.