ವಿಜಯವಾಣಿ ಸುದ್ದಿಜಾಲ ಗದಗ
ಗ್ರಾಮಿಣಾಭಿವೃದ್ಧಿ ವಿವಿ ಸ್ಥಾಪನೆ ಸಂದರ್ಭದಲ್ಲಿ ಸಾಗುವಳಿದಾರರಿಗೆ ಅನ್ಯಾಯವಾಗಿದ್ದರೆ ದಾಖಲೆ ಪರಿಶೀಲಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಚಿವ ಎಚ್.ಕೆ. ಪಾಟೀಲ ಭರವಸೆ ನೀಡಿದರು.
ಉತ್ತರ ಕರ್ನಾಟಕ ಮಹಾಸಾಭಾ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕಳೆದ ಮೂರು ದಿನಗಳಿಂದ ಜರುಗುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಧರಣಿ ನಿರತರೊಂದಿಗೆ ಮಾತನಾಡಿದ ಅವರು, ವಿವಿ ಸ್ಥಾಪನೆ ವೇಳೆ ರೈತರಿಗೆ ಅನ್ಯಾಯವಾಗಿದ್ದರೆ ಅದನ್ನು ಸರಿಪಡಿಸಲು ಸರ್ಕಾರ ಸಿದ್ಧವಿದೆ. ಸೂಕ್ತ ದಾಖಲೆ ಪರಿಶೀಲನೆ ಮಾಡಿ ಪರಿಹಾರ ನೀಡಲಾಗುವುದು. ದಾಖಲೆಗಳನ್ನು ಜಿಲ್ಲಾಧಿಕಾರಿಗೆ ಒದಗಿಸಿ. ದಾಖಲೆಗಳ ಪರಿಶೀಲನೆ ನಂತರ ಅರ್ಹ ಲಾನುಭವಿಗಳಿಗೆ ಪರಿಹಾರ ಒದಗಿಸಲಾಗುವುದು. ರೈತರ ಅಜಿರ್ಗಳನ್ನು ಮರು ಪರಿಶೀಲನೆ ಮಾಡಲಾಗುವುದು ಎಂದರು.
ಮಹಾಸಭಾ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ಸಮಸ್ಯೆಗಳಿಗೆ ಪರಿಹಾರ ಸಿಗಬೇಕು. ವಿವಿ ಸ್ಥಾಪನೆ ಭೂಮಿಯಲ್ಲಿ ಖರಾಬ್ ಭೂಮಿ ಇದೆ. ಆದರೂ ಪ್ರಭಾವಿಗಳಿಗೆ ಹಣ ಸಂದಾಯವೇಕೆ ಎಂದು ಪ್ರಶ್ನಿಸಿದರು. ಈ ವಿಷಯದಲ್ಲಿ ರೈತರು ಬೀದಿ ಪಾಲಾಗಿದ್ದಾರೆ. ಈ ಮೊದಲು ರೈತರಿಂದ ಸಲ್ಲಿಸಿದ ಅಜಿರ್ಗಳ ತುರ್ತು ಮರು ಪರಿಶೀಲನೆ ನಡೆಸಬೇಕು ಮತ್ತು ಜಿಲ್ಲಾಧಿಕಾರಿಗಳು ಲಿಖಿತ ರೂಪದಲ್ಲಿ ಭರವಸೆ ಕೊಟ್ಟರೆ ಮಾತ್ರ ಧರಣಿ ಹಿಂಪಡೆಯುವುದಾಗಿ ತಿಳಿಸಿದರು. ಧರಣಿ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಕೋಟ್:
ಬಗರ್ ಹುಕುಂ ಸಾಗುವಳಿ ಸಮಸ್ಯೆಗಳು ಗಂಭೀರ ಸ್ವರೂಪದ್ದಾಗಿವೆ. ನೂರಾರು ರೈತರ ಜೀವನದ ಪ್ರಶ್ನೆ ಇದಾಗಿದ್ದರಿಂದ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು. ರೈತರ ಈ ಸಮಸ್ಯೆಗಳನ್ನು ಅಧಿವೇಶನದಲ್ಲಿ ಪ್ರಶ್ನಿಸಲಾಗುವುದು.
-ಎಸ್.ವಿ, ಸಂಕನೂರು, ವಿಧಾನ ಪರಿಷತ್ ಸದಸ್ಯ.