ಜಿಲ್ಲೆ

ಬಾಗಲಕೋಟೆ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿ..!

ಬಾಗಲಕೋಟೆ: ಕೋವಿಡ್ ಆತಂಕದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಜಿಲ್ಲೆಯಲ್ಲಿ ಸುಸೂತ್ರದಿಂದ ಸೋಮವಾರ ಜರುಗಿತು. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಕರೊನಾ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಯಿತು. ಕೋಟೆನಾಡಿನಲ್ಲಿ ಪರೀಕ್ಷೆಯು ಯಾವುದೇ ಅಡ್ಡಿ, ಆತಂಕವಿಲ್ಲದೆ ಯಶಸ್ವಿಯಾಗಿ ನಡೆಯಿತು.

ಬಾಗಲಕೋಟೆ ನಗರ ಸೇರಿದಂತೆ ಜಿಲ್ಲೆಯ ಎಲ್ಲ ಭಾಗದಲ್ಲಿ 173 ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿತ್ತು. ಎಸ್ಸೆಸ್ಸೆಲ್ಸಿ ಮೊದಲ ದಿನ ಪರೀಕ್ಷೆಯಲ್ಲಿ ನೋಂದಣಿಯಾಗಿದ್ದ ಒಟ್ಟು 31421 ವಿದ್ಯಾರ್ಥಿಗಳ ಪೈಕಿ 31337 ವಿದ್ಯಾರ್ಥಿಗಳು ಹಾಜರಾಗಿ 84 ವಿದ್ಯಾರ್ಥಿಗಳು ಗೈರು ಉಳಿದಿದ್ದರು. ಅನಾರೋಗ್ಯ ಕಾರಣದಿಂದ ಇಬ್ಬರು ವಿದ್ಯಾರ್ಥಿಗಳು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಯಿತು.

ಹೂ ಮಳೆ ಸ್ವಾಗತ
ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಪ್ರತಿ ಹಂತದಲ್ಲಿಯೂ ಕೋವಿಡ್ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿತ್ತು. ಪರೀಕ್ಷಾ ಕೇಂದ್ರ ಒಳಗೆ ಪ್ರವೇಶಿಸುವ ಮುನ್ನ ಥರ್ಮಲ್ ಸ್ಕ್ರೀನಿಂಗ್ ಮೂಲಕ ಸಿಬ್ಬಂದಿ, ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಲಾಯಿತು. ಮಾಸ್ಕ್, ಪರಸ್ಪರ ಅಂತರ್ ಪಾಲನೆಗೆ ಒತ್ತು ನೀಡಲಾಗಿತ್ತು. ಸ್ಯಾನಿಟೈಜರ್ ಸಿಂಪಡಣೆ ಮಾಡಲಾಯಿತು. ಜಮಖಂಡಿ ನಗರದ ಪಿ.ಬಿ. ಹೈಸ್ಕೂಲ್ ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಹೂ ಮಳೆ ಸುರಿಸಿ ಸ್ವಾಗತ ಕೋರಿದ್ದು ಗಮನ ಸೆಳೆಯಿತು. ಪಾಲಕರು, ಪೋಷಕರು ತಮ್ಮ ಮಕ್ಕಳ ಆರೋಗ್ಯ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು ಕಂಡು ಬಂದಿತು.

ಇದೇ ಮೊದಲ ಬಾರಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ರೂಪಿಸಿರುವ ಎಸ್‌ಒಪಿ ಅನ್ವಯ ಓಎಂಆರ್ ಶೀಟ್‌ನಲ್ಲಿ ಬಹು ಆಯ್ಕೆ ಉತ್ತರಿಸುವ ಮಾದರಿಯಲ್ಲಿ ಪರೀಕ್ಷೆ ನಡೆಯಿತು. ಸೋಮವಾರ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಪರೀಕ್ಷೆ ಜರುಗಿದವು. ಗುರುವಾರ ಭಾಷಾ ವಿಷಯಗಳ ಪರೀಕ್ಷೆಗಳು ನಡೆಯಲಿದೆ. ಈ ಸಾರಿ ಯಾವ ವಿದ್ಯಾರ್ಥಿಗಳು ೇಲ್ ಆಗುವ ಪ್ರಸಂಗವಿಲ್ಲ. ವಿದ್ಯಾರ್ಥಿ ಉತ್ತರ ಆಧಾರದಲ್ಲಿ ಗ್ರೇಡ್ ನೀಡಲಾಗುತ್ತದೆ. ಪರೀಕ್ಷೆಗಾಗಿ ಜಿಲ್ಲೆಯಲ್ಲಿ 173 ಮುಖ್ಯ ಅಧೀಕ್ಷಕರು, 5,355 ಸಿಬ್ಬಂದಿ ನಿಯೋಜಿಸಲಾಗಿತ್ತಯ. ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಒದಗಿಸಲಾಗಿತ್ತು.

ಆರೋಗ್ಯ ತಪಾಸಣೆ ಜೊತೆಗೆ ತಾಲೂಕಿಗೆ ಒಂದರಂತೆ ತುರ್ತು ಚಿಕಿತ್ಸಾ ವಾಹನ, ಮಾಸ್ಕ್ ವಿತರಣೆ, ಶುದ್ಧ ಕುಡಿವ ನೀರು, ಸಾರಿಗೆ ವ್ಯವಸ್ಥೆ ಸೇರಿದಂತೆ ನಗರ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳು ತಾವಿರುವಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು.

ಕೋವಿಡ್ ಹಿನ್ನೆಲೆಯಲ್ಲಿ ಲಸಿಕೆ ಹಾಕಿಸಿಕೊಂಡ ಸಿಬ್ಬಂದಿಯನ್ನೇ ಪರೀಕ್ಷೆ ಕಾರ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲಾಗಿತ್ತು. ಸೋಮವಾರ ಸುಗಮವಾಗಿ ಪರೀಕ್ಷೆ ನಡೆದಿವೆ. ಸರ್ಕಾರಿ ಅಥವಾ ಖಾಸಗಿ ವಸತಿ ನಿಲಯದಲ್ಲಿದ್ದು 99 ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡು ಒಟ್ಟು 624 ವಲಸೆ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದಾರೆ.
- ಶ್ರೀಶೈಲ ಬಿರಾದಾರ ಡಿಡಿಪಿಐ ಬಾಗಲಕೋಟೆ

ಕಣ್ಣೀರು ಹಾಕಿದ ವಿದ್ಯಾರ್ಥಿ
ಪ್ರವೇಶ ಪತ್ರ ಇಲ್ಲದೆ ಪರೀಕ್ಷೆ ಕುಳಿತುಕೊಳ್ಳಲು ಅವಕಾಶ ಸಿಗದೇ ವಿದ್ಯಾರ್ಥಿ ಹಾಕಿದ ಘಟನೆ ಬಾಗಲಕೋಟೆ ನಗರದಲ್ಲಿ ನಡೆಯಿತು. ನಗರದ ಬಸವೇಶ್ವರ ಪ್ರೌಢಶಾಲೆಯ ಮಹಮ್ಮದಖೈಫ್ ಸೌದಾಗರ ಎನ್ನುವ ವಿದ್ಯಾರ್ಥಿ ಪರೀಕ್ಷೆಯ ಅರ್ಜಿ ತುಂಬಿರಲಿಲ್ಲ. ಹೀಗಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗಲಿಲ್ಲ ಎಂದು ಸಂಸ್ಥೆಯವರು ತಿಳಿಸಿದರು. ವಿದ್ಯಾರ್ಥಿ ಮಹಮ್ಮದ ಸೌದಾಗರ ಮಾತನಾಡಿ, ತರಗತಿಗೆ ಹಾಜರಾಗಿಲ್ಲ. ಅಂತ ಅರ್ಜಿ ಹಾಕಲು ಅವಕಾಶ ನೀಡಲಿಲ್ಲ. ಇದೀಗ ಪರೀಕ್ಷೆಯಿಂದ ವಂಚಿತನಾದೆ ಎಂದು ಅಳಲು ತೋಡಿಕೊಂಡರು.