ಬಾಗಲಕೋಟೆ: ಹಿಂದುತ್ವವೂ ಎಲ್ಲರನ್ನೂ ಸಮನ್ವಯಗೊಳಿಸುವ ಶಕ್ತಿಯಾಗಿ ಬೆಳೆದಿದೆ. ಸಮಾಜದಲ್ಲಿ ಸಾಮರಸ್ತ ಮೂಡಿದಾಗ ಮಾತ್ರ ನಿಜವಾದ ಹಿಂದುತ್ವ ನಿರ್ಮಾಣವಾಗುತ್ತದೆ ಎಂದು ಆರ್ಎಸ್ಎಸ್ನ ವಿಜಯಪುರ ವಿಭಾಗದ ಸಹ ಸಂಪರ್ಕ ಪ್ರಮುಖ ವಿವೇಕ ಹಂಜಗಿ ಹೇಳಿದರು.
ವಿಜಯದಶಮಿ ನಿಮಿತ್ತ ಭಾನುವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಾಲಕರ ಪಥಸಂಚಲನ ನಡೆದ ಬಳಿಕ ವಿದ್ಯಾಗಿರಿಯ ಗೌರಿಶಂಕರ ಕಲ್ಯಾಣ ಮಂಟಪದ ಆವರಣದಲ್ಲಿ ನಡೆದ ಸಾರ್ವಜನಿಕ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಸಂಘದಿಂದ ಆಚರಿಸುವ ಆರು ಹಬ್ಬಗಳ ಪೈಕಿ ವಿಜಯದಶಮಿ ಒಂದಾಗಿದೆ. ಅನ್ಯಾಯ, ಅಧರ್ಮದ ಮೇಲೆ ದಬ್ಬಾಳಿಕೆ ಆದಾಗ ನ್ಯಾಯದ ಗೆಲುವು ಸಾರಿದಾಗ ಪುರುಷಾರ್ಥವನ್ನು ಸಮಾಜದಲ್ಲಿ ಜಾಗೃತಿಗೊಳಿಸುವ ಹಬ್ಬ ಇದಾಗಿದೆ ಎಂದರು.
ಭಾರತೀಯ ಸಂಸ್ಕೃತಿ ತ್ಯಾಗ ಮತ್ತು ಮನುಷ್ಯತ್ವದ ಕಡೆಗೆ ತೆಗೆದುಕೊಂಡು ಹೋಗುತ್ತದೆ. ನಮ್ಮ ಸಂಸ್ಕೃತಿಯು ಅಳವಿನಂಚಿಗೆ ಬಂದಾಗಲೆಲ್ಲಾ ಸಂತರು, ಸಮಾಜ ಸುಧಾರಕರು ಮತ್ತು ರಾಷ್ಟ್ರೀಯ ಸ್ವಯಂ ಸಂಘದ ಪ್ರಮುಖರು ಅದನ್ನು ಉಳಿಸಿದ್ದಾರೆ. ದೇಶದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಸಮಾಜದಲ್ಲಿ ಎದುರಾದ ಸಂಕಷ್ಟಗಳು, ಪ್ರವಾಹ-ಭೂಕಂಪಗಳಂತಹ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಸಮಾಜಕ್ಕೆ ಧೈರ್ಯ ಮಾಡಿದೆ ಎಂದು ವಿವರಿಸಿದರು.
2500 ವರ್ಷದ ಸಂಘರ್ಷದ ಹೋರಾಟದಿಂದ ಭಾರತೀಯ ಸಂಸ್ಕೃತಿ ಉಳಿದಿದೆ. ದೇಶದಲ್ಲಿ ಸ್ವಾರ್ಥ ಭಾವನೆ ಹೆಚ್ಚಾಗಿತ್ತು. ಹಣದ ಆಸೆಗೆ ನಮ್ಮವರನ್ನೆ ಬ್ರಿಟಿಷರಿಗೆ ಹಿಡಿದುಕೊಡುವ ಭಾವನೆ ಉಳ್ಳವರು ನಮ್ಮಲ್ಲಿದ್ದರು. ಆದರೆ, ದೇಶದಲ್ಲಿ ಸಂಘವು ಇರದಿದ್ದರೆ ಬರೀ ಅಪಮಾನಗಳನ್ನು ಅನುಭವಿಸಬೇಕಾಗುತ್ತಿತ್ತು. ಸಂಘವು ನಮ್ಮ ಸಂಸ್ಕೃತಿಯನ್ನು ಕಾಪಾಡಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಶ್ರೀರಾಮ ಭಾರತೀಯ ಸಂಸ್ಕೃತಿಯ ಗೌರವದ ಪ್ರತೀಕರಾಗಿದ್ದಾರೆ. ಆದರ್ಶ ವ್ಯಕ್ತಿಗಳನ್ನು ರೂಪಿಸುವ ಮೂಲಕ ಸಮಾಜವನ್ನು ನಿರ್ಮಿಸಬೇಕಾಗಿದೆ. ಭಾರತವು ಜಗತ್ತಿಗೆ ಮಾರ್ಗದರ್ಶನ ನೀಡುವ ವಿಶ್ವಗುರುವಾಗಬೇಕು ಎಂಬುದು ಸಂಘಟನೆಯ ಪ್ರಮುಖ ಆಶಯವಾಗಿದೆ ಎಂದರು.
ಈ ಉದ್ದೇಶದಿಂದಲೇ ಡಾ.ಗುರೂಜಿಯವರು ಸಂಘದ ಶಾಖೆಗಳಿಗೆ ಬಾಲಕರನ್ನು ಕರೆತಂದು ಶಿಸ್ತು, ಸೇವಾ ಮನೋಭಾವ, ದೇಶಭಕ್ತಿ ಹಾಗೂ ಸಂಘಟನೆಯ ಮೌಲ್ಯಗಳನ್ನು ಬೆಳೆಸುವ ಪ್ರಯತ್ನ ನಡೆಸಿದ ಲದಿಂದ ದೇಶದ ಮೂಲೆ ಮೂಲೆಗಳಲ್ಲಿ ಸಂಘ ಬೆಳೆದು ನಿಂತಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಆರ್ಎಸ್ಎಸ್ ಜಿಲ್ಲಾ ಸಂಘಚಾಲಕ ಚಂದ್ರಶೇಖರ ದೊಡ್ಡಮನಿ ಉಪಸ್ಥಿತಿದ್ದರು. ಕಾರ್ಯಕ್ರಮಕ್ಕೂ ಮುನ್ನ ಶಾರೀರಿಕ ಪ್ರದರ್ಶನ ನಡೆಯಿತು.
ಇದಕ್ಕೂ ಮೊದಲು ವಿದ್ಯಾಗಿರಿಯಲ್ಲಿ ಜರುಗಿದ ಘೋಷಸಹಿತ ಬಾಲಕರ ಪಥಸಂಚಲನವು ಗಮನಸೆಳೆಯಿತು. ವಿದ್ಯಾಗಿರಿಯ ಅಥಣಿ ಕಲ್ಯಾಣ ಮಂಟಪದಿಂದ ಸಂಜೆ 4ಕ್ಕೆ ಪಥಸಂಚಲನ ಆರಂಭಗೊಂಡಿತು. ಬಾಲಕರು ಗಣವೇಷಧಾರಿಗಳಾಗಿ ದಂಡ ಹಿಡಿದು ಹೆಜ್ಜೆ ಹಾಕಿದರು. ವಿದ್ಯಾಗಿರಿ ಕಾಲೇಜು ವೃತ್ತದಿಂದ ನೇತಾಜಿ ಹಾಸ್ಟೇಲ್ ರಸ್ತೆಯಲ್ಲಿ ಸಾಗಿ ಹಲವು ಒಳರಸ್ತೆಗಳಲ್ಲಿ ಪಥಸಂಚಲನ ಸಾಗಿತು. ನಂತರ 22ನೇ ಕ್ರಾಸ್ ಮುಖಾಂತರ ವಿದ್ಯಾಗಿರಿ ಕಾಲೇಜು ವತ್ತಕ್ಕೆ ಮರಳಿ. ಗೌರಿಶಂಕರ ಮಂಗಲ ಕಾರ್ಯಾಲಯದ ಆವರಣದಲ್ಲಿ ಸಂಪನ್ನಗೊಂಡಿತು. ನಂತರ ಬೌದ್ಧಿಕ ಜರುಗಿತು. ಪಥಸಂಚಲನದ ಮಾರ್ಗದಲ್ಲಿ ಚಿತ್ತಾಕರ್ಷ ರಂಗೋಲಿಯನ್ನು ಬಿಡಿಸಿ ಪಥಸಂಚಲನವನ್ನು ಸ್ವಾಗತಿಸಲಾಯಿತು. ಗಣವೇಷಧಾರಿಗಳು ಸಾಗಿ ಬಂದಾಗ ಪುಷ್ಪವೃಷ್ಠಿ ಮೂಲಕ ಸ್ವಾಗತ ಕೋರಲಾಯಿತು. ಮಕ್ಕಳು ಛತ್ರಪತಿ ಶಿವಾಜಿ ಮಹಾರಾಜರು, ಕಿತ್ತೂರ ರಾಣಿ ಚೆನ್ನಮ್ಮ, ಭಗತ್ಸಿಂಗ್, ನೇತಾಜಿ ಸುಭಾಶ್ಚಂದ್ರ ಬೋಸ್, ಸೈನಿಕರ ವೇಷಭೂಷಣದಲ್ಲಿ ಮಿಂಚಿದರು.