ಮುಧೋಳ ತಾಲೂಕಿನ ತಿಮ್ಮಾಪುರ ರನ್ನ ನಗರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಕಾರ್ಮಿಕರ ರಾಜ್ಯಮಟ್ಟದ ಸಮಾವೇಶದ ಪ್ರಚಾರ ಸಾಮಗ್ರಿಗಳನ್ನು ಉಮೇಶ ಬಡಿಗೇರ ಬಿಡುಗಡೆ ಮಾಡಿದರು. ಉಪಾಧ್ಯಕ್ಷ ನಾಗಪ್ಪ ಕೆಳಗಡೆ, ಕಾರ್ಯದರ್ಶಿ ಪಾಂಡಪ್ಪ ಮುಳ್ಳೂರ, ಸದಸ್ಯರಾದ ಕಾಳಪ್ಪ ಕಂಬಾರ, ಈರಣ್ಣ ಬಳೂಲದ, ಗುರುರಾಜ ಕುಂಬಾರ, ಸತೀಶ ಮಂಟೂರ ಇತರರಿದ್ದರು. 
ಬಾಗಲಕೋಟೆ

ಸೆ.27ರಂದು ರಾಜ್ಯ ಸಕ್ಕರೆ ಕಾರ್ಖಾನೆ ಕಾರ್ಮಿಕರ ಸಮಾವೇಶ

ಅಧ್ಯಕ್ಷ ಉಮೇಶ ಬಡಿಗೇರ ಮಾಹಿತಿ * ಪ್ರಚಾರ ಸಾಮಗ್ರಿ ಬಿಡುಗಡೆ

ಮುಧೋಳ: ರಾಜ್ಯದ ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ರಾಜ್ಯಮಟ್ಟದ ಒಂದು ದಿನದ ಸಮಾವೇಶ ಸೆ.27ರಂದು ಬೆಳಗಾವಿಯ ಇಂಜಿನಿಯರ್ ಭವನದಲ್ಲಿ ನಡೆಯಲಿದೆ ಎಂದು ತಿಮ್ಮಾಪುರ ರನ್ನ ನಗರ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಎಂಪ್ಲಾಯಿಜಿ ಯೂನಿಯನ್ ಅಧ್ಯಕ್ಷ ಉಮೇಶ ಬಡಿಗೇರ ತಿಳಿಸಿದರು.

ತಾಲೂಕಿನ ತಿಮ್ಮಾಪುರ ರನ್ನ ನಗರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸಮಾವೇಶದ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯದ 81 ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಕಟಾವು ಕಾರ್ಮಿಕರು ಸೇರಿ ಸುಮಾರು 15 ಲಕ್ಷ ಮಂದಿ ಉದ್ಯೋಗದಲ್ಲಿದ್ದಾರೆ. ಕಾರ್ಮಿಕರ ವೇತನ ಹಾಗೂ ಸೇವಾ ಸೌಲಭ್ಯಗಳ ಪರಿಷ್ಕರಣೆಗೆ ಸಂಬಂಧಿಸಿದ 8ನೇ ವೇತನ ಸಮಿತಿಯ ಕಾರ್ಯಚಟುವಟಿಕೆಗಳು ಪರಿಣಾಮಕಾರಿಯಾಗಿಲ್ಲ ಎಂದು ಹೇಳಿದರು.

7ನೇ ವೇತನ ಶ್ರೇಣಿ ಜಾರಿಗೆ ಸಂಬಂಧಿಸಿದಂತೆ ನ್ಯಾಯಾಲಯದ ತಡೆಯಾಜ್ಞೆಯಿಂದಾಗಿ ಅನುಷ್ಠಾನವಾಗಿಲ್ಲ. ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರ ನೇಮಕಾತಿಯಲ್ಲಿ ಅಕ್ರಮಗಳನ್ನು ತಡೆದು, ಕಾರ್ಮಿಕರ ಹಿತಾಸಕ್ತಿ ಕಾಪಾಡಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಉಪಾಧ್ಯಕ್ಷ ನಾಗಪ್ಪ ಕೆಳಗಡೆ, ಕಾರ್ಯದರ್ಶಿ ಪಾಂಡಪ್ಪ ಮುಳ್ಳೂರ, ಸದಸ್ಯರಾದ ಕಾಳಪ್ಪ ಕಂಬಾರ, ಈರಣ್ಣ ಬಳೂಲದ, ಗುರುರಾಜ ಕುಂಬಾರ, ಸತೀಶ ಮಂಟೂರ, ಶ್ರೀಶೈಲ ಗುರವ, ಭೀಮಶಿ ಗಲಗಲಿ, ಚಂದ್ರಶೇಖರ ದೇಸಾಯಿ, ಗೋವಿಂದ ಅವರಾದಿ ಸೇರಿ ಹಲವರು ಉಪಸ್ಥಿತರಿದ್ದರು.