ಮುಧೋಳ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಮುಧೋಳ ತಾಲೂಕು ಮಟ್ಟದ ಯುವ ಸಂಸತ್ ಸ್ಪರ್ಧೆ ಶಾಸಕ ಆರ್.ಬಿ. ತಿಮ್ಮಾಪೂರ ಉದ್ಘಾಟಿಸಿದರು. ಸಂಗಪ್ಪ ಇಮ್ಮನವರ, ಶ್ವೇತಾ ಬಿಡಿಕರ, ಡಾ.ಚಿಕ್ಕಪ್ಪ ನಾಯಕ ಇದ್ದರು. 
ಬಾಗಲಕೋಟೆ

ಸಮಾಜಮುಖಿ ಚಿಂತನೆಗಳು ಜಾಗೃತವಾಗಿರಲಿ

ಶಾಸಕ ಆರ್.ಬಿ. ತಿಮ್ಮಾಪೂರ ಅಭಿಮತ ಗಮನ ಸೆಳೆದ ತಾಲೂಕು ಮಟ್ಟದ ಯುವ ಸಂಸತ್ ಸ್ಪರ್ಧೆ

ಮುಧೋಳ: ಯುವ ಸಂಸತ್ತಿನಂತಹ ಕಾರ್ಯಕ್ರಮಗಳು ಪ್ರಜಾಪ್ರಭುತ್ವದ ಆಶಯ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ಶಾಸಕ, ಮಾಜಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಮ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಮುಧೋಳ ತಾಲೂಕು ಮಟ್ಟದ ಯುವ ಸಂಸತ್ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ರೈತರು ಎದುರಿಸುತ್ತಿರುವ ಸಮಸ್ಯೆಗಳು, ಕುಡಿಯುವ ನೀರಿನ ಬಿಕ್ಕಟ್ಟು, ರೈತರ ಹೋರಾಟಗಳು ಹಾಗೂ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮಾರ್ಗಗಳ ಕುರಿತು ಯುವ ಜನರು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಲ್ಲಿ ರಾಜಕೀಯ, ಆಡಳಿತಾತ್ಮಕ ಹಾಗೂ ಸಾಂವಿಧಾನಿಕ ಅರಿವು ಮೂಡಿಸುವುದು ಶ್ಲಾಘನೀಯ. ಇಂತಹ ವೇದಿಕೆಗಳು ಭವಿಷ್ಯದ ಸಮರ್ಥ ನಾಯಕರನ್ನು ರೂಪಿಸಲು ಸಹಕಾರಿಯಾಗಲಿವೆ. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳು ಬೆಳೆಯಲಿ, ಸಮಾಜಮುಖಿ ಚಿಂತನೆಗಳು ಜಾಗೃತವಾಗಿರಲಿ ಎಂದು ತಿಳಿಸಿದರು.

ನೈಜ ಸದನದ ಕಾರ್ಯವೈಖರಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಪಾತ್ರ, ಹಕ್ಕುಗಳು ಹಾಗೂ ಜವಾಬ್ದಾರಿಗಳ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಲಾಯಿತು.

ಎಪಿಎಂಸಿ ಅಧ್ಯಕ್ಷ ಸಂಗಪ್ಪ ಇಮ್ಮನ್ನವರ, ಉಪಾಧ್ಯಕ್ಷ ಭೀಮಶಿ ಮೆಟಗುಡ್ಡ, ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಕ, ತಾ.ಪಂ. ಇಒ ರಾಘವೇಂದ್ರ ಕಳ್ಳಿಮನಿ, ಬಿಇಒ ಸಮೀರ ಮುಲ್ಲಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಡಿ. ನ್ಯಾಮಗೌಡ, ಪ್ರಕಾಶ ಯರಗಟ್ಟಿ ಇದ್ದರು.

ಸಂಖ್ಯಾಬಲದ ಬಲದಿಂದ ಮಸೂದೆಗೆ ಅಸ್ತು

ಯುವ ಸಂಸತ್ ಸ್ಪರ್ಧೆಯು ನಾನಾ ಕಾರಣಗಳಿಂದ ಗಮನ ಸೆಳೆಯಿತು. ಆಡಳಿತ-ವಿರೋಧ ಪಕ್ಷದ ವಾಗ್ವಾದ ಸಾರ್ವಜನಿಕರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತೆ ಮಾಡಿತು. ನಕಲಿ ಔಷಧಗಳ ಹಾವಳಿ, ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ, ರೈತರ ವಿದ್ಯುತ್ ಸಮಸ್ಯೆ, ಬರಗಾಲದ ಸಂಕಷ್ಟ, ಗ್ಯಾರಂಟಿ ಯೋಜನೆಗಳ ಸಾಧಕ-ಬಾಧಕ ಸೇರಿದಂತೆ ಹತ್ತಾರು ಜನ ಸಮಸ್ಯೆಗಳು ಪ್ರತಿಧ್ವನಿಸಿದವು.

ಮುಖ್ಯವಾಗಿ 18 ವರ್ಷದೊಳಗಿನ ಮಕ್ಕಳ ಮೊಬೈಲ್ ಬಳಕೆಗೆ ನಿಬರ್ಂಧ ಹೇರುವ ಮಸೂದೆ ಯುವ ಸಂಸತ್ತಿನಲ್ಲಿ ರಾಜಕೀಯ ಕಾವೇರಿಸಿತು. ಎಸ್‌ಸಿಪಿ-ಟಿಎಸ್‌ಪಿ ಯೋಜನೆಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ ಕನ್ನಡ ಭಾಷೆ, ನಾಡು-ನುಡಿ ಮತ್ತು ಸಂಸ್ಕೃತಿಯ ಸಂರಕ್ಷಣೆಯ ವಿಚಾರಗಳೂ ಚರ್ಚೆಯಾದವು. ಅರಣ್ಯ, ಪ್ರವಾಸೋದ್ಯಮ, ವಸತಿ ಸೇರಿದಂತೆ ಹಲವು ಇಲಾಖೆಗಳ ಸಮಸ್ಯೆಗಳ ಬಗ್ಗೆಯೂ ಸದಸ್ಯರು ತಮ್ಮ ಅಭಿಪ್ರಾಯ ಮಂಡಿಸಿದರು.

ಗ್ಯಾರಂಟಿ ಯೋಜನೆಗಳ ಬಗ್ಗೆಯು ವಾಕ್ಸಮರ ಆಕರ್ಷಿಸಿತು. ಕೊನೆಗೆ ಯುವ ಸಂಸತ್ತಿನ ಕಲಾಪದ ಕೊನೆಯ ಹಂತದಲ್ಲಿ 18 ವರ್ಷದೊಳಗಿನ ಮಕ್ಕಳ ಮೊಬೈಲ್ ಬಳಕೆಗೆ ನಿರ್ಬಂಧ ಹೇರುವ ಮಸೂದೆ ಮಂಡನೆಯಾಯಿತು. ಮಸೂದೆಗೆ ಉತ್ತಮ ಬೆಂಬಲ ವ್ಯಕ್ತವಾಯಿತು.

ಮುಧೋಳ ನಗರದ ಡಾ. ಬಿ.ಅರ್ .ಅಂಬೇಡ್ಕರ್ ಸಭಾ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಯುವ ಸಂಸತ್ ಸ್ಪರ್ಧೆಯ ಸನ್ನಿವೇಶ.
ಯುವ ಸಂಸತ್ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ಸಂಸದೀಯ ಪ್ರಜಾಪ್ರಭುತ್ವದ ಕಾರ್ಯವೈಖರಿ, ಶಾಸನ ರಚನೆ, ಚರ್ಚೆ ಹಾಗೂ ಜನ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಉತ್ತಮ ವೇದಿಕೆಯಾಗಿದೆ. ವಿವಿಧ ಇಲಾಖೆಗಳ ಸಮಸ್ಯೆಗಳ ಕುರಿತು ಚರ್ಚಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ತಾರ್ಕಿಕ ಚಿಂತನೆ ಮತ್ತು ಸಾಮಾಜಿಕ ಜವಾಬ್ದಾರಿ ಬೆಳೆಸುತ್ತದೆ. > ಪ್ರಕಾಶ ಯರಗಟ್ಟಿ, ಕಾರ್ಯಕ್ರಮ ಆಯೋಜಕ ಶಿಕ್ಷಕ