ಮಹಾಲಿಂಗಪುರ ಪಟ್ಟಣದ ಲಿಂ. ಶರಣ ಶ್ರೀ ಬಾಲಚಂದ್ರಣ್ಣ ಚೆಣ್ಣಿ ಪ್ರತಿಷ್ಠಾನದ ವತಿಯಿಂದ ಚೆಣ್ಣಿ ಅವರ 16ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಶರಣೋತ್ಸವ ಕಾರ್ಯಕ್ರಮ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಮಾತೋಶ್ರೀ ವಿದ್ಯಾವತಿ ತಾಯಿ ಉದ್ಘಾಟಿಸಿದರು. ಸಹಜಯೋಗಿ ಸಹಜಾನಂದ ಶ್ರೀಗಳು, ಗೊಲೇಶ ಅಮ್ಮಣಗಿ ಇದ್ದರು.
ಬಾಗಲಕೋಟೆ

ಶರಣರ ಬದುಕು ಸಮಾಜಕ್ಕೆ ದಾರಿದೀಪ

ಸಹಜಾನಂದ ಶ್ರೀಗಳ ಹೇಳಿಕೆ

ಮಹಾಲಿಂಗಪುರ: ಶರಣರ ಬದುಕು ಕೇವಲ ಭಕ್ತಿಯ ಪ್ರತೀಕವಲ್ಲ. ಕಾಯಕ, ದಾಸೋಹ, ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಸಾಕಾರ ರೂಪ. ಅವರ ತತ್ವ, ಚಿಂತನೆ ಹಾಗೂ ಆದರ್ಶಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ಸ್ಥಳೀಯ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಯೋಗಿ ಸಹಜಾನಂದ ಶ್ರೀಗಳು ಹೇಳಿದರು.

ಪಟ್ಟಣದ ಲಿಂ. ಶರಣ ಶ್ರೀ ಬಾಲಚಂದ್ರಣ್ಣ ಚೆಣ್ಣಿ ಪ್ರತಿಷ್ಠಾನದ ವತಿಯಿಂದ ಚೆಣ್ಣಿ ಅವರ 16ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಶರಣೋತ್ಸವ 2026 ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಶರಣರ ವಚನಗಳು ಇಂದಿಗೂ ಮನುಷ್ಯನ ಬದುಕಿಗೆ ಮಾರ್ಗದರ್ಶನ ನೀಡುತ್ತಿವೆ. ಅವರ ಜೀವನದ ಸಂದೇಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪಾಲಿಸಬೇಕು ಎಂದು ತಿಳಿಸಿದರು.

ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಮಾತೋಶ್ರೀ ವಿದ್ಯಾವತಿ ತಾಯಿ ಮಾತನಾಡಿ, ನುಡಿದಂತೆ ನಡೆಯುವದು, ದುಡಿದು ಬದುಕುವುದು, ಗಳಿಸಿದ್ದರಲ್ಲಿ ಹಂಚಿಕೊಂಡು ತಿನ್ನುವುದು ಶರಣರ ಬದುಕಿನ ಆದರ್ಶವಾಗಿದೆ. ಕಾಯಕವೇ ಕೈಲಾಸವೆಂದು, ನಿತ್ಯದ ಕರ್ತವ್ಯವನ್ನೇ ಶಿವನ ಆರಾಧನೆಯೆಂದು ಭಾವಿಸಿ ಬದುಕಿದವರು ಎಂದರು.

ಶರಣ ಮಲ್ಲಪ್ಪ ಕಟಗಿ, ಪ್ರತಿಷ್ಠಾನದ ಗೌರವಾಧ್ಯಕ್ಷ ಅಣ್ಣಾಜಿ ಪಡತಾರೆ, ಪ್ರೊ. ಬಿ.ಎಚ್. ಮಾರದ ಮಾತನಾಡಿದರು. ಪ್ರತಿಷ್ಥಾನದ ಅಧ್ಯಕ್ಷ ಗೊಲೇಶ ಅಮ್ಮಣಗಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಪ್ರತಿಷ್ಠಾನದ ಸಂಚಾಲಕ ಭೀಮಶಿ ನೆಗಿನಾಳ, ಚಂದ್ರಶೇಖರ ಗೊಂದಿ, ಮಲ್ಲು ಯಾದವಾಡ, ವೀರೇಶ ಆಸಂಗಿ, ಮಹಾಲಿಂಗಪ್ಪ ಕರೆಹೊನ್ನ, ಜಿ.ಕೆ. ಮಠಪತಿ, ಹನುಮಂತ ರೆಡ್ಡಿ, ಎಸ್.ಬಿ. ರಡ್ಡೆರಟ್ಟಿ, ಕರಿಯಪ್ಪ ಮಾದಪ್ಪನವರ ಉಪಸ್ಥಿತರಿದ್ದರು.

ಸರೋಜಿನಿ ಶಿರೋಳ ಭಕ್ತಿಗೀತೆ ಹಾಡಿದರು, ಬಸವರಾಜ ಹಡಪದ ಪ್ರಾರ್ಥಿಸಿದರು. ಎಸ್.ಕೆ. ಗಿಂಡೆ ಸ್ವಾಗತಿಸಿದರು. ಹುಮಾಯನ ಸುತಾರ ನಿರೂಪಿಸಿದರು. ಬುದ್ನಿ ಪಿಡಿ ಭಜನಾ ಕಲಾವಿದರಿಂದ ಭಕ್ತಿಗೀತೆ ಹಾಗೂ ಭಜನಾ ಕಾರ್ಯಕ್ರಮ ಜರುಗಿತು.