ಬಾಗಲಕೋಟೆ: ದೇಶದಲ್ಲಿ ಯುವಸಮೂಹ ವ್ಯಾಪಕವಾಗಿ ರ್ಯಾಗಿಂಗ್ ಸಮಸ್ಯೆಯನ್ನು ಎದುರಿಸುತ್ತಿದೆ. ರ್ಯಾಗಿಂಗ್ ವ್ಯಸನ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುತ್ತಿದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ರ್ಯಾಗಿಂಗ್ ಪಿಡುಗಿನಿಂದ ಹೊರಬರುವುದು ತುರ್ತು ಅಗತ್ಯವಾಗಿದೆ ಎಂದು ನವನಗರ ಪೊಲೀಸ್ ಠಾಣೆಯ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಅಶೋಕ ಚವಾಣ್ ತಿಳಿಸಿದರು.
ಬಿವಿವಿ ಸಂಘದ ಪಿ.ಎಂ.ಎನ್.ಎಂ. ದಂತ ವೈದ್ಯಕೀಯ ಕಾಲೇಜಿನಲ್ಲಿ ಗುರುವಾರ ಜರುಗಿದ ಆ್ಯಂಟಿ-ರ್ಯಾಗಿಂಗ್ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರ್ಯಾಗಿಂಗ್ ಒಂದು ಅಪರಾಧ ಪ್ರಕರಣ. ರ್ಯಾಗಿಂಗ್ ಮಾಡುವುದು ಮತ್ತು ರ್ಯಾಗಿಂಗ್ಗೆ ಒಳಗಾಗುವುದು ಎರಡೂ ತಪ್ಪು. ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ. ನಿಮ್ಮ ವಿದ್ಯಾರ್ಥಿ ಬದುಕಿನಲ್ಲಿ ಪರಸ್ಪರರ ನಡುವೆ ಸಮನ್ವಯವಿರಲಿ. ಸನ್ನಡತೆಯ ಮೂಲಕ ರ್ಯಾಗಿಂಗ್ ಪಿಡುಗನ್ನು ಇಲ್ಲವಾಗಿಸಿ. ನಿಮ್ಮ ಭವಿಷ್ಯಕ್ಕಾಗಿ ಶ್ರಮಿಸುವ ಪಾಲಕರ ಪರಿಶ್ರಮವನ್ನು ಮರೆಯದಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಡೆಂಟಲ್ ಕಾಲೇಜ್ ಪ್ರಾಚಾರ್ಯ ಡಾ.ರವಿರಾಜ ದೇಸಾಯಿ, ನಮ್ಮ ಕಾಲೇಜು ರ್ಯಾಗಿಂಗ್ ಮುಕ್ತ ಕಾಲೇಜು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ. ಕಾಲೇಜಿನ ರ್ಯಾಗಿಂಗ್ ವಿರೋಧಿ ಸಮಿತಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳ ನಡುವೆ ಉತ್ತಮ ಸ್ನೇಹಬಾಂಧ್ಯವಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆ ಮತ್ತು ಪರೀಕ್ಷೆಯಲ್ಲಿನ ಪ್ರಗತಿ ಇದು ರ್ಯಾಗಿಂಗ್ ಮುಕ್ತ ಕಾಲೇಜ್ ಎನ್ನುವುದಕ್ಕೆ ದಷ್ಟಾಂತವಾಗಿದೆ ಎಂದು ಹೇಳಿದರು.
ಡಾ.ಹಿರಣ್ಮಯಿ ಮತ್ತು ಡಾ.ಭೀಮಪ್ಪ ಅವರು, ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳು ಪಾಲಿಸಬೇಕಾದ ನಿಯಮಗಳನ್ನು ತಿಳಿಸಿದರು. ರ್ಯಾಗಿಂಗ್ ವಿರೋಧಿ ಸಮಿತಿಯ ನೋಡಲ್ ಅಧಿಕಾರಿ ಡಾ.ಕಾಶಿನಾಥ ಅರಬ್ಬಿ ಇದ್ದರು.