ಲೋಕಾಪುರದಲ್ಲಿ ಕಲುಷಿತ ನೀರು ಪೂರೈಕೆ ಖಂಡಿಸಿ ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ವಾರ್ಡ್ ನಂ. 9ರ ನಿವಾಸಿಗಳು. 
ಬಾಗಲಕೋಟೆ

ಲೋಕಾಪುರದಲ್ಲಿ ಕಲುಷಿತ ನೀರು ಪೂರೈಕೆಗೆ ಖಂಡನೆ

ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿ ನಿವಾಸಿಗಳ ಪ್ರತಿಭಟನೆ 15 ದಿನಗಳಿಂದ ನೀರಿಲ್ಲದೆ ವಾರ್ಡ್ ನಂ. 9ರ ನಿವಾಸಿಗಳ ಪರದಾಟ

ಲೋಕಾಪುರ: ಪಟ್ಟಣದಲ್ಲಿ ಕಳೆದ ಹಲವು ತಿಂಗಳುಗಳಿಂದ ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿರುವುದನ್ನು ಖಂಡಿಸಿ ಹಾಗೂ ವಾರ್ಡ್ ನಂ. 9ರಲ್ಲಿ ಕಳೆದ ಸುಮಾರು 15 ದಿನಗಳಿಂದ ಸಮರ್ಪಕವಾಗಿ ನೀರು ಪೂರೈಕೆಯಾಗದಿರುವುದನ್ನು ವಿರೋಧಿಸಿ ಆಕ್ರೋಶಗೊಂಡ ನಿವಾಸಿಗಳು ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪಟ್ಟಣದ ದೇಸಾರ ವಾಡೆ, ಭೋವಿ ಗಲ್ಲಿ, ಪಿಕೆಪಿಎಸ್ ಸೊಸೈಟಿ ಸಮೀಪ, ಬ್ರಾಹ್ಮಣ ಗಲ್ಲಿ ಹಾಗೂ ವೆಂಕಟೇಶ್ವರ ನಗರ ಸೇರಿ ಹಲವು ಪ್ರದೇಶಗಳಲ್ಲಿ ಕಪ್ಪು ಬಣ್ಣದ, ದುರ್ವಾಸನೆಯಿಂದ ಕೂಡಿದ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ನಲ್ಲಿಗಳಲ್ಲಿ ಹರಿದು ಬರುವ ಕಾಫಿ ಬಣ್ಣದ ನೀರನ್ನು ಕುಡಿಯಲು ಹಾಗೂ ದಿನನಿತ್ಯದ ಬಳಕೆಗೆ ಉಪಯೋಗಿಸಲಾಗದ ಸ್ಥಿತಿ ನಿರ್ಮಾಣವಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿಯಿಂದ ಜನರು ಆತಂಕಕ್ಕೊಳಗಾಗಿದ್ದಾರೆ.

ಸರ್ಕಾರ ಕುಡಿಯುವ ನೀರಿನ ಶುದ್ಧೀಕರಣ ಹಾಗೂ ಪೂರೈಕೆಗಾಗಿ ಅನುದಾನ ಒದಗಿಸುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ನೀರನ್ನು ಸಮರ್ಪಕವಾಗಿ ಶುದ್ಧೀಕರಿಸದೆ ಸಾರ್ವಜನಿಕರಿಗೆ ಪೂರೈಸುತ್ತಿದ್ದಾರೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಐದಾರು ತಿಂಗಳಿಂದ ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ದೂರಿದರು.

ಕಲುಷಿತ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವವರೆಗೆ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಬೇಕು. ನೀರಿನ ಗುಣಮಟ್ಟವನ್ನು ಪರಿಶೀಲಿಸಿ, ಸಮರ್ಪಕವಾಗಿ ಶುದ್ಧೀಕರಿಸಿದ ನಂತರವೇ ನಲ್ಲಿಗಳ ಮೂಲಕ ನೀರು ಸರಬರಾಜು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ನೀರು ಪೂರೈಕೆ ಅವ್ಯವಸ್ಥೆಯನ್ನು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕಿದೆ.

ಕ್ರದ್ದೀನ ಬೂದಿಹಾಳ, ಗುಲಾಬಸಾಬ ಅತ್ತಾರ, ಸೈಯದಸಾಬ ಜೀರಗಾಳ, ಲಾಲಸಾಬ ತೋರಗಲ್ಲ, ವಿಠ್ಠಲ ಹಡಪದ, ಇನಾಯತಲ್ಲಾ ಜಮಾದಾರ, ಹುಸೇನಸಾಬ ರಾಮದುರ್ಗ, ಸಲೀಮಬಾಷಾ ಬೂದಿಹಾಳ ಸೇರಿ ಭೋವಿ ಗಲ್ಲಿಯ ಸಾರ್ವಜನಿಕರು ಹಾಗೂ ವಾರ್ಡ್ ನಂ. 9ರ ಮಹಿಳೆಯರು ಪಾಲ್ಗೊಂಡಿದ್ದರು.

ವರ್ಚಗಲ್ ಕೆರೆಯಿಂದ ಪೂರೈಕೆಯಾಗುವ ನೀರು ದುರ್ವಾಸನೆ ಹಾಗೂ ಕೊಳಕಿನಿಂದ ಕೂಡಿದೆ. ನೀರನ್ನು ಫಿಲ್ಟರ್ ಮಾಡದೆ ಹಾಗೆಯೇ ಪೂರೈಸಲಾಗುತ್ತಿದೆ. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಕಲುಷಿತ ನೀರು ಸೇವನೆಯಿಂದ ಯಾವುದೇ ಅನಾಹುತ ಸಂಭವಿಸಿದರೆ ಪಟ್ಟಣ ಪಂಚಾಯತಿ ಅಧಿಕಾರಿಗಳು ಹಾಗೂ ತಹಸೀಲ್ದಾರರು ಹೊಣೆ ಹೊರಬೇಕಾಗುತ್ತದೆ. ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಗುಲಾಬಸಾಬ ಅತ್ತಾರ, 9ನೇ ವಾರ್ಡ್ ನಿವಾಸಿ
ಲೋಕಾಪುರ ಪಟ್ಟಣ ಪಂಚಾಯತಿಯಿಂದ ಪೂರೈಕೆಯಾಗುತ್ತಿರುವ ಕಲುಷಿತ ನೀರು.