ಬೀಳಗಿ ಪಟ್ಟಣದ ಟಿಎಪಿಸಿಎಂಎಸ್ ಪ್ರಾಂಗಣದಲ್ಲಿ ಗೋದಾಮ ನಿರ್ಮಾಣದ ಕಾಮಗಾರಿಗಳಿಗೆ ಶಾಸಕ ಜೆ. ಟಿ.ಪಾಟೀಲ ಭೂಮಿ ಪೂಜೆ ನೆರವೇರಿಸಿದರು. ಟಿಎಪಿಸಿಎಂಎಸ್ ಅಧ್ಯಕ್ಷ ಎಂ. ಬಿ.ಕಂಬಿ, ಉಪಾಧ್ಯಕ್ಷ ಸಿದ್ದು ಗಿರಗಾಂವಿ ಇತರರಿದ್ದರು. 
ಬಾಗಲಕೋಟೆ

ರೈತರು ಗೋದಾಮುಗಳ ಸದುಪಯೋಗ ಪಡೆದುಕೊಳ್ಳಲಿ

ಶಾಸಕ ಜೆ.ಟಿ. ಪಾಟೀಲ ಹೇಳಿಕೆ * ಬೀಳಗಿ ಎಪಿಎಂಸಿಗೆ 4.10 ಕೋಟಿ ರೂ. ಅನುದಾನ

ಬೀಳಗಿ: ರೈತರ ಉತ್ಪನ್ನಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಬೀಳಗಿ, ಬಿಸನಾಳ, ಯಡಹಳ್ಳಿ ಹಾಗೂ ಕೋಲೂರ ಗ್ರಾಮಗಳಲ್ಲಿ ಗೋದಾಮುಗಳನ್ನು ನಿರ್ಮಿಸಲಾಗುವುದು. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ, ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಪಟ್ಟಣದ ಕಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಬುಧವಾರ ನಬಾರ್ಡ್‌ನ ಆರ್‌ಐಡಿಎ್-31 ಯೋಜನೆಯಡಿ 410.93 ಲಕ್ಷ ರೂ. ಅನುದಾನದಲ್ಲಿ ಕೈಗೆತ್ತಿಕೊಳ್ಳಲಾದ ಏಳು ವಿವಿಧ ಕಾಮಗಾರಿಗಳು ಹಾಗೂ ಗ್ರಾಮಗಳಲ್ಲಿ ಗೋದಾಮು ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕಾಮಗಾರಿಗಳನ್ನು ಗುತ್ತಿಗೆ ಪಡೆದವರು ಗುಣಮಟ್ಟ ಕಾಯ್ದುಕೊಂಡು, ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಶಾಸಕರು ಸೂಚಿಸಿದರು.

ಗೋದಾಮು ಮಾಲೀಕರಿಗೆ 15 ದಿನಗಳ ಗಡುವು

ಎಪಿಎಂಸಿ ವ್ಯಾಪ್ತಿಯಲ್ಲಿ ಗೋದಾಮು ಖರೀದಿಸಿರುವ ಕೆಲ ಮಾಲೀಕರು ಅಲ್ಲಿಗೆ ಬಂದು ವ್ಯವಹಾರ ನಡೆಸುತ್ತಿಲ್ಲ. ಅಂತಹವರು 15 ದಿನಗಳೊಳಗೆ ಎಪಿಎಂಸಿಯಲ್ಲಿ ವ್ಯಾಪಾರ ಚಟುವಟಿಕೆ ಆರಂಭಿಸಬೇಕು. ಇಲ್ಲವಾದಲ್ಲಿ ನೋಟಿಸ್ ನೀಡಿ, ನಿಯಮಾನುಸಾರ ಗೋದಾಮು ಖರೀದಿ ರದ್ದುಪಡಿಸುವ ಕ್ರಮ ಕೈಗೊಳ್ಳಬೇಕು ಎಂದು ಎಪಿಎಂಸಿ ಅಧಿಕಾರಿಗಳಿಗೆ ಜೆ.ಟಿ. ಪಾಟೀಲ ಸೂಚಿಸಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಬಿ. ಕಂಬಿ, ಉಪಾಧ್ಯಕ್ಷ ಸಿದ್ದು ಗಿರಗಾಂವಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಅಣವಿರಯ್ಯ ಆರ್. ಪ್ಯಾಟಿಮಠ, ನಿರ್ದೇಶಕರಾದ ಎಸ್.ಡಿ. ಗೌಡರ, ಮಲ್ಲಪ್ಪ ಕಾಳಗಿ, ರಾಜು ಬೋರ್ಜಿ, ದೊಡ್ಡಣ್ಣ ದೇಸಾಯಿ, ಪಡಿಯಪ್ಪ ತಿರಕನ್ನವರ, ಕೀರಯ್ಯ ಮಠಪತಿ, ಪಾರ್ವತಿ ಕೋಲಾರ, ಎಸ್.ಎಚ್. ಮುಜಾವರ, ಮಹಾದೇವ ಹಾದಿಮನಿ, ಎಪಿಎಂಸಿ ಕಾರ್ಯದರ್ಶಿ ಶರಣು ಕುಲಕರ್ಣಿ ಸೇರಿ ಹಲವರು ಉಪಸ್ಥಿತರಿದ್ದರು.