ಜಮಖಂಡಿ: ಜೋಡೆತ್ತಿನ ಕೃಷಿ ಸಂಸ್ಕೃತಿಯ ಉಳಿವಿಗಾಗಿ ಸರ್ಕಾರದ ಗಮನ ಸೆಳೆಯಲು ರೈತರು ಎತ್ತು ಹಾಗೂ ಎತ್ತಿನ ಬಂಡಿಗಳೊಂದಿಗೆ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ನಿಂತು ಬಹತ್ ಪ್ರತಿಭಟನೆ ನಡೆಸಿದರು.
ತಾಲೂಕಿನ ಚಿಕ್ಕಲಕಿ ಕ್ರಾಸ್ನಲ್ಲಿ ವಿಜಯಪುರ-ಧಾರವಾಡ ರಾಜ್ಯ ಹೆದ್ದಾರಿಯನ್ನು ತಡೆದು ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿದ ನಂದಿ ಸೇನೆಯ ಪದಾಧಿಕಾರಿಗಳು ಹಾಗೂ ರೈತರು, ಕೃಷಿ ಸಂಸ್ಕೃತಿಯ ಪುನಶ್ಚೇತನಕ್ಕಾಗಿ ರಾಜ್ಯ ಬಜೆಟ್ನಲ್ಲಿ ಶೇ. 10ರಷ್ಟು ಅನುದಾನ ಮೀಸಲಿಡಬೇಕು. ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು 11 ಸಾವಿರ ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಜೋಡೆತ್ತುಗಳಿಲ್ಲದೆ ಕೃಷಿಯ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದೆ ಜೋಡೆತ್ತಿನ ಕೃಷಿಕರು ಇಂದು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಎತ್ತುಗಳ ಬಳಕೆ ಕಡಿಮೆಯಾಗುತ್ತಿರುವುದರಿಂದ ಸಾಂಪ್ರದಾಯಿಕ ಕೃಷಿ ಪದ್ಧತಿ ನಶಿಸುವ ಭೀತಿ ಎದುರಾಗಿದೆ. ಬಯಲುಸೀಮೆಯ ಬೆಳೆಗಳ ಜೀವಸತ್ವ ಹಾಗೂ ಇಳುವರಿಯ ಸ್ಥಿರತೆ ಕಾಪಾಡಲು ಜೋಡೆತ್ತಿನ ಕೃಷಿಯನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಯೋಜನೆ ರೂಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ನಂದಿ ಸೇನೆ ಅಧ್ಯಕ್ಷ ಸಿದ್ದನಗೌಡ ಪಾಟೀಲ ಮಾತನಾಡಿ, ಸರ್ಕಾರ ಜೋಡೆತ್ತಿನ ಕೃಷಿಕರ ಬೇಡಿಕೆಗಳನ್ನು ಈಡೇರಿಸಲು ಕೂಡಲೇ ವಿಶೇಷ ಅಧಿವೇಶನ ಕರೆಯಬೇಕು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಬೇಡಿಕೆ ಈಡೇರಿಸುವ ಭರವಸೆ ನೀಡುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಈಗಾಗಲೇ 500 ಜೋಡೆತ್ತುಗಳ ಮೂಲಕ ರಾಜ್ಯ ಹೆದ್ದಾರಿ ಬಂದ್ ಮಾಡಲಾಗಿದೆ. ಸರ್ಕಾರ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಹೆದ್ದಾರಿಗಳ ಮೇಲೆ ಎತ್ತಿನ ಬಂಡಿಗಳೊಂದಿಗೆ ರಸ್ತೆ ತಡೆ ನಡೆಸಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೇಡಿಕೆಗಳಿಗೆ ಸ್ಪಂದಿಸುವವರೆಗೂ ಹೆದ್ದಾರಿ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ರಾಮಪ್ಪ ಕರ್ಜಗಿ, ಮಹೇಶ ದೇಶಪಾಂಡೆ, ಶ್ರೀಶೈಲ ಮೈಗೂರ, ಗೋಪಾಲ ಬಳಗಾರ, ಸಿದ್ದು ಬೊಸಲೆ, ಅಜಯ ಕುಲಕರ್ಣಿ, ಬಸವರಾಜ ಬಿರಾದಾರ ಸೇರಿ ನಂದಿ ಸೇನೆಯ ಪದಾಧಿಕಾರಿಗಳು ಹಾಗೂ ರೈತರು ಪಾಲ್ಗೊಂಡಿದ್ದರು.