ಜಮಖಂಡಿ ನಗರದಲ್ಲಿ ನಡೆದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಮಾಜಿ ಸಿಎಂ ಸಂಸದ ಜಗದೀಶ ಶೆಟ್ಟರ ಅವರನ್ನು ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು ಸನ್ಮಾನಿಸಿದರು. ಶಾಸಕ ಜಗದೀಶ ಗುಡಗುಂಟಿ ಇತರರಿದ್ದಾರೆ. 
ಬಾಗಲಕೋಟೆ

ಮಾನವೀಯ ಮೌಲ್ಯಗಳಿಂದ ವಿಶ್ವಶಾಂತಿ: ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ್ ಅಭಿಮತ

ವೀರಶೈವ-ಲಿಂಗಾಯತ ಎರಡ ಒಂದೇ ಸಮಾಜ ಒಗ್ಗೂಡಿಸಲು ಆದ್ಯತೆ

ಜಮಖಂಡಿ: ವೀರಶೈವ ಲಿಂಗಾಯತ ಸಮಾಜದ ಒಳಪಂಗಡಗಳ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಸಮಾಜದ ಒಗ್ಗಟ್ಟಿಗೆ ಆದ್ಯತೆ ನೀಡಬೇಕು. ಎಲ್ಲ ಸಮಾಜಗಳನ್ನು ಒಗ್ಗೂಡಿಸಿ ಶಾಂತಿ, ಸಾಮರಸ್ಯದ ಸಂದೇಶ ಸಾರುವ ಕಾರ್ಯವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ್ ಹೇಳಿದರು.

ನಗರದಲ್ಲಿ ರಂಭಾಪುರಿ ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜಗದ್ಗುರು ರೇಣುಕಾಚಾರ್ಯರ ಪರಂಪರೆ ಹಾಗೂ 12ನೇ ಶತಮಾನದ ಬಸವಣ್ಣನವರ ಸಾಮಾಜಿಕ ಸುಧಾರಣೆ ಸಂದೇಶಗಳು ಸಮಾಜಕ್ಕೆ ಮಾರ್ಗದರ್ಶಿಯಾಗಿವೆ. ಅವುಗಳ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ವೀರಶೈವ ಮತ್ತು ಲಿಂಗಾಯತ ಸಮಾಜ ಒಂದೇ ಎಂಬ ಏಕತೆಯ ಭಾವನೆಯೊಂದಿಗೆ ಎಲ್ಲರೂ ಮುನ್ನಡೆಯಬೇಕು. ಸಮಾಜವನ್ನು ವಿಭಜಿಸುವ ಬದಲು ಒಗ್ಗೂಡಿಸುವ ಪ್ರಯತ್ನಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ನವರಾತ್ರಿ ಮತ್ತು ದಸರಾ ಕೇವಲ ಹಬ್ಬದ ಆಚರಣೆಗೆ ಸೀಮಿತವಾಗಬಾರದು. ಮಹಿಷಾಸುರನ ಸಂಹಾರದ ಸಂಕೇತದಂತೆ ಮನುಷ್ಯನಲ್ಲಿರುವ ದುಷ್ಟ ಆಲೋಚನೆ, ದುರಭ್ಯಾಸಗಳನ್ನು ತೊಡೆದುಹಾಕಿ ಸನ್ನಡತೆ ಬೆಳೆಸಿಕೊಳ್ಳಬೇಕು. ಧರ್ಮದ ತಳಹದಿಯಲ್ಲಿ ಶಾಂತಿ, ಸಾಮರಸ್ಯದ ಸಮಾಜ ನಿರ್ಮಾಣವಾಗಬೇಕು. ಭೌತಿಕ ಸಂಪತ್ತಿಗಿಂತ ಆಧ್ಯಾತ್ಮಿಕ ಸಂಪತ್ತು ಶಾಶ್ವತವಾದುದು ಎಂದರು.

ಟಿವಿ ಹಾಗೂ ಮೊಬೈಲ್ ಬಳಕೆಯಿಂದ ಮಕ್ಕಳ ಶಿಕ್ಷಣ ಮತ್ತು ವ್ಯಕ್ತಿತ್ವದ ಮೇಲೆ ಉಂಟಾಗುವ ಪರಿಣಾಮಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಬೆಳಗಾವಿ ಸಮೀಪದ ಗ್ರಾಮವೊಂದರಲ್ಲಿ ರಾತ್ರಿ 7ರಿಂದ 9ರವರೆಗೆ ಸ್ವಯಂಪ್ರೇರಿತವಾಗಿ ಟಿವಿ ಮತ್ತು ಮೊಬೈಲ್ ಬಳಕೆ ನಿಲ್ಲಿಸಿ, ಮಕ್ಕಳ ಓದಿಗೆ ಸಮಯ ಮೀಸಲಿಡುವ ನಿರ್ಧಾರ ಕೈಗೊಂಡಿರುವುದನ್ನು ಉದಾಹರಿಸಿದ ಅವರು, ಇಂತಹ ಜನಜಾಗೃತಿ ಸಮಾಜದಲ್ಲಿ ಉತ್ತಮ ಬದಲಾವಣೆ ತರಬಲ್ಲದು ಎಂದು ತಿಳಿಸಿದರು.

ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಯುದ್ಧ ಮತ್ತು ಸಂಘರ್ಷಗಳ ಪರಿಣಾಮ ಎಲ್ಲ ರಾಷ್ಟ್ರಗಳ ಮೇಲೂ ಬೀರುತ್ತಿದೆ. ಹೀಗಾಗಿ ಧಾರ್ಮಿಕ ಚಿಂತನೆ, ಆಧ್ಯಾತ್ಮಿಕ ಅರಿವು ಹಾಗೂ ಮಾನವೀಯ ಮೌಲ್ಯಗಳ ಮೂಲಕ ವಿಶ್ವಶಾಂತಿಯ ಸಂದೇಶ ಸಾರುವ ಅಗತ್ಯವಿದೆ. ‘ಮಾನವ ಧರ್ಮಕ್ಕೆ ಜಯವಾಗಲಿ’ ಎಂಬ ಆಶಯ ಎಲ್ಲರನ್ನೂ ಒಂದುಗೂಡಿಸುವಂತದ್ದು ಎಂದು ಹೇಳಿದರು.

ರಂಭಾಪುರಿ ಜಗದ್ಗುರುಗಳು ಧರ್ಮಜಾಗೃತಿ ಮತ್ತು ಆಧ್ಯಾತ್ಮಿಕ ಚಿಂತನೆಯ ಮೂಲಕ ಸಮಾಜದಲ್ಲಿ ಶಾಂತಿ, ಒಗ್ಗಟ್ಟು ಮೂಡಿಸಲು ನಿರಂತರ ಶ್ರಮಿಸುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಮಾಜದ ಏಕತೆ ಬಲಗೊಳ್ಳಲಿ ಎಂದು ಆಶಿಸಿದರು. ರೈತರ ಸಂಕಷ್ಟಗಳಿಗೆ ಸರ್ಕಾರ ನೆರವಾಗಬೇಕು ಹಾಗೂ ರೈತರ ಬೆಂಬಲಕ್ಕೆ ಸಮಾಜವೂ ನಿಲ್ಲಬೇಕು ಎಂದು ಹೇಳಿದರು.

ಅಂಜುಮನ್ ಕಮೀಟಿ ಅಧ್ಯಕ್ಷ ಡಾ. ತೌಫಿಕ ಪಾರ್ಥನಳ್ಳಿ ಮಾತನಾಡಿ, ಮಹಮ್ಮದ್ ಪೈಗಂಬರ್ ಅವರು ಸಮಾನತೆ, ಮಾನವೀಯತೆ ಹಾಗೂ ಭೇದಭಾವವಿಲ್ಲದ ಸಮಾಜದ ಸಂದೇಶ ಸಾರಿದ್ದಾರೆ. ಅದೇ ರೀತಿ ಬಸವಣ್ಣನವರು ಕೂಡ ಸಮಾನತೆಗಾಗಿ ಹೋರಾಡಿದ್ದಾರೆ. ಎಲ್ಲ ಧರ್ಮಗಳ ಮಹನೀಯರು ಸಾರಿದ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್. ಪೂಜಾರ, ಕೆ.ಎಸ್. ನವಿನ್ ಮಾತನಾಡಿದರು. ಶಾಸಕ ಜಗದೀಶ ಗುಡಗುಂಟಿ, ಬಸವ ಸಮಿತಿ ಅಧ್ಯಕ್ಷ ಕಾಡು ಮಾಳಿ, ನಿಖಿಲ ಮಹಾಬಳಶೆಟ್ಟಿ, ನಿಲೇಶ ಹಜಾರೆ ಇತರರಿದ್ದರು.

ಜಮಖಂಡಿ ನಗರದಲ್ಲಿ ನಡೆದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಅಂಜುಮನ್ ಕಮೀಟಿ ಅಧ್ಯಕ್ಷ ಡಾ. ತೌಫಿಕ ಪಾರ್ಥನಳ್ಳಿ ನೇತತ್ವದಲ್ಲಿ ಮುಸ್ಲಿಂ ಸಮಾಜದ ಮುಖಂಡರು ರಂಭಾಪುರಿ ಮಹಾಪೀಠದ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳನ್ನು ಸನ್ಮಾನಿಸಿದರು.