ಜಮಖಂಡಿ ನಗರದಲ್ಲಿ ನಡೆದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಯುವ ಧುರಿಣ ಸಿದ್ದಪ್ಪ ಬಸಪ್ಪ ಕವಟಗಿ ಅವರಿಗೆ ‘ರಂಭಾಪುರಿ ಯುವ ಸಿರಿ’ ಪ್ರಶಸ್ತಿಯನ್ನು ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು ಪ್ರದಾನ ಮಾಡಿದರು. ಮಾಜಿ ಸಿಎಂ ಜಗದೀಶ ಶೆಟ್ಟರ, ಶಾಸಕ ನಾಡೋಜ ಜಗದೀಶ ಗುಡಗುಂಟಿ, ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್. ಪೂಜಾರ, ಕೆ.ಎಸ್. ನವೀನ್ ಇತರರಿದ್ದಾರೆ. 
ಬಾಗಲಕೋಟೆ

ಭೌತಿಕ ಬದುಕಿಗೆ ಆಧ್ಯಾತ್ಮದ ಜ್ಞಾನ ಅಗತ್ಯ: ರಂಭಾಪುರಿ ಶ್ರೀಗಳ ಅಭಿಮತ

ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ

ಜಮಖಂಡಿ: ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಆದರ್ಶಗಳೇ ದಾರಿ ದೀಪ. ನ್ಯಾಯ, ನೀತಿಗಳ ನಟನೆಯಾಗದೆ ನಡೆಯಲ್ಲಿ ಬೆಳೆದು ಬರಬೇಕು. ಮನುಷ್ಯ ಧರ್ಮದಿಂದ ವಿಮುಖನಾದರೆ ಶಾಂತಿ ನೆಮ್ಮದಿ ದೊರಕದು. ಭೌತಿಕ ಬದುಕಿನಲ್ಲಿ ಆಧ್ಯಾತ್ಮಿಕ ಅರಿವು, ಅನುಸಂಧಾನ ಜೀವನದ ಶ್ರೇಯಸ್ಸಿಗೆ ಕಾರಣವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು ಅಭಿಪ್ರಾಯಪಟ್ಟರು.

ನಗರದದಲ್ಲಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 8ನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಮಾಜದ ಓರೆ ಕೋರೆಗಳನ್ನು ತಿದ್ದಿ ತೀಡಿ ಮುನ್ನಡೆಸುವುದೇ ಮಹಾನುಭಾವರ ಕರ್ತವ್ಯವಾಗಿದೆ. ಹೊಸತನದ ಜೊತೆಗೆ ಹಿರಿತನದ ಕಳೆ ಮೇಳೈಸಿದಾಗ ಬದುಕಿಗೆ ಬೆಲೆ ಮತ್ತು ಬಲ ಬರುತ್ತದೆ. ಕೆಡುಕುಗಳನ್ನು ಮೆಟ್ಟಿನಿಂತು ಒಳಿತಿನತ್ತ ಹೆಜ್ಜೆ ಹಾಕುವುದೇ ಮಾನವನ ಗುರಿಯಾಗಬೇಕು ಎಂದರು.

ಕಾಯಿಸಿದ ಚಿನ್ನ ಒಡವೆಯಾಗುತ್ತದೆ. ಬಡಿದ ತಾಮ್ರ ತಂತಿಯಾಗುತ್ತದೆ. ಕೆತ್ತಿದ ಕಲ್ಲು ಸುಂದರ ಮೂರ್ತಿ ಆಗುತ್ತದೆ. ಅದರಂತೆ ಮನುಷ್ಯನಿಗೆ ಬರುವ ಕಷ್ಟಗಳಿಂದ ಜೀವನದ ಮೌಲ್ಯಗಳು ಸಂವರ್ಧಿಸುತ್ತವೆ. ಬಾಲ್ಯದಲ್ಲಿ ಜ್ಞಾನ ಯೌವನದಲ್ಲಿ ಸಂಪತ್ತು ಮತ್ತು ವದ್ಧಾಪ್ಯದಲ್ಲಿ ಪುಣ್ಯ ಸಂಪಾದಿಸಿಕೊಂಡು ಬಾಳಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ ಎಂದರು.

ಬೆಳಗುವ ದೀಪಕ್ಕೆ ಎಣ್ಣೆ ಮುಖ್ಯ ಇದ್ದಂತೆ ಸರ್ವ ಚಟುವಟಿಕೆಗಳಿಗೆ ಆತ್ಮವಿಶ್ವಾಸವೇ ಮೂಲ. ಸ್ವಾರ್ಥ ರಹಿತ ಬದುಕಿಗೆ ಬೆಲೆ ಮತ್ತು ಬಲವಿದೆ. ಹಿರಿಯರ ಮೌಲ್ಯಾಧಾರಿತ ಚಿಂತನೆಗಳು ಬಾಳಿನ ಆಶಾದೀಪಗಳು. ಮನುಷ್ಯ ಸ್ವಾರ್ಥಕ್ಕಾಗಿ ಆದರ್ಶ ಮೌಲ್ಯಗಳನ್ನು ಬಲಿ ಕೊಡಬಾರದು. ದೇವರು ಎಲ್ಲೆಡೆಯಲ್ಲಿ ತುಂಬಿದ್ದರೂ ಮನುಷ್ಯನ ಅಂತರಂಗದಲ್ಲಿ ನೆಲೆಗೊಂಡಿದ್ದಾನೆ. ವೀರಶೈವ ಧರ್ಮದ ಆಧ್ಯಾತ್ಮಿಕ ಚಿಂತನೆ ಮತ್ತು ಮಾನವೀಯ ಮೌಲ್ಯಗಳು ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗುತ್ತವೆ ಎಂದರು.

ಜಮಖಂಡಿ ನಗರದ ಕಲೂತಿ ಕಲ್ಯಾಣ ಮಂಟಪದಲ್ಲಿ ರಂಭಾಪುರಿ ಮಹಾಪೀಠದ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು.

ಇದೇ ಸಂದರ್ಭದಲ್ಲಿ 2027ನೇ ಸಾಲಿನ ದಸರಾ ಕಾರ್ಯಕ್ರಮವನ್ನು ಬಳ್ಳಾರಿ ನಗರದಲ್ಲಿ ಜರುಗಿಸಲು ವಿನಂತಿಸಿ ಬಳ್ಳಾರಿ ಜಿಲ್ಲಾ ವೀರಶೈವ ಮುಖಂಡರು ಮನವಿ ಸಲ್ಲಿಸಿದರು. ಇದಕ್ಕೆ ಉತ್ತರವಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಹಲವಾರು ನಗರಗಳಲ್ಲಿ 2027ನೇ ಸಾಲಿನ ಶರನ್ನವರಾತ್ರಿ ದಸರಾ ಮಹೋತ್ಸವ ಆಚರಿಸಲು ಬೇಡಿಕೆಗಳು ಬಂದಿದ್ದು ಸಮಾರಂಭದ ಕೊನೆಗೆ ಅಂದರೆ ಅ. 20ರ ಸಮಾರಂಭದಲ್ಲಿ ಮುಂದಿನ ವರ್ಷ ದಸರಾ ಆಚರಿಸುವ ಸ್ಥಳದ ಅಂತಿಮ ಆಯ್ಕೆಯನ್ನು ಪ್ರಕಟಿಸುವುದಾಗಿ ತಿಳಿಸಿದರು.

ಸುಳ್ಳ ಪಂಚಗ್ರಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಪರಮಾತ್ಮನು ಕೇವಲ ದೇವಾಲಯಗಳಲ್ಲಿ ಇಲ್ಲ. ಭಕ್ತನ ಹದಯ ದೇವರದಲ್ಲಿ ನೆಲೆಸಿದ್ದಾನೆ ಎಂಬ ಆಧ್ಯಾತ್ಮಿಕ ಚಿಂತನೆಗೆ ಬಹಳಷ್ಟು ಮಹತ್ವವಿದೆ. ದೇವರು ಎಲ್ಲೆಡೆ ತುಂಬಿ ಹೊಮ್ಮಿ ಜೀವಸಂಕುಲವನ್ನು ಕಾಪಾಡುತ್ತಿದ್ದಾನೆ. ದೇವರ ಮೇಲಿನ ನಂಬಿಕೆ ಶಾಶ್ವತ ನಂದಾದೀಪ ಎಂದರು.

ಬಂಡಿವಾಡದ ಸಾಹಿತ್ಯ ಸಂಶೋಧಕ ಡಾ. ಎ.ಸಿ. ವಾಲಿ ಉಪನ್ಯಾಸ ನೀಡಿ, ತಂತ್ರಜ್ಞಾನ ಬೆಳೆದರೂ ಮನುಷ್ಯನ ನಡುವಿನ ಪ್ರೀತಿ ಕಾಳಜಿ ಕಡಿಮೆಯಾಗಬಾರದು. ತಂತ್ರಜ್ಞಾನವನ್ನು ಶಿಕ್ಷಣ ಆರೋಗ್ಯ ಬಡವರಿಗೆ ಸಹಾಯ ಮತ್ತು ಸಮಾಜದ ಅಭಿವದ್ಧಿಗೆ ಬಳಕೆಯಾಗಬೇಕು ಎಂದರು.

ನಗರದ ಯುವ ಧುರಿಣ ಸಿದ್ದಪ್ಪ ಬಸಪ್ಪ ಕವಟಗಿ ಅವರಿಗೆ ‘ರಂಭಾಪುರಿ ಯುವ ಸಿರಿ’ ಪ್ರಶಸ್ತಿಯನ್ನು ಜಗದ್ಗುರುಗಳು ಪ್ರದಾನ ಮಾಡಿದರು.

ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್. ಪೂಜಾರ, ಕೆ.ಎಸ್. ನವೀನ್, ಶಾಸಕ ನಾಡೋಜ ಜಗದೀಶ ಗುಡಗುಂಟಿ, ಬಸವ ಸಮಿತಿ ಅಧ್ಯಕ್ಷ ಕಾಡು ಮಾಳಿ, ಅಂಜುಮನ್ ಕಮೀಟಿ ಅಧ್ಯಕ್ಷ ಡಾ. ತೌಫೀಕ ಪಾರ್ಥನಳ್ಳಿ, ನಿಖಿಲ ಮಹಾಬಳಶೆಟ್ಟಿ, ನಿಲೇಶ ಹಜಾರೆ ಇತರರಿದ್ದರು.

ಗೀತಾ ಸೂರ್ಯವಂಶಿ ಸ್ವಾಗತಿಸಿದರು. ಕೊಣ್ಣೂರು ಹೊರಗಿನ ಮಠದ ಡಾ. ವಿಶ್ವ ಪ್ರಭುದೇವ ಶಿವಾಚಾರ್ಯ ಶ್ರೀ ಪ್ರಾಸ್ತವಿಕವಾಗಿ ಮಾತನಾಡಿದರು. ಶಾಂತಾ ಆನಂದ ನಿರೂಪಿಸಿದರು.

ಜಮಖಂಡಿ ನಗರದಲ್ಲಿ ನಡೆದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ 2027ನೇ ಸಾಲಿನ ದಸರಾ ಕಾರ್ಯಕ್ರಮವನ್ನು ಬಳ್ಳಾರಿ ನಗರದಲ್ಲಿ ಜರುಗಿಸಲು ವಿನಂತಿಸಿ ಬಳ್ಳಾರಿ ಜಿಲ್ಲಾ ವೀರಶೈವ ಮುಖಂಡರು ಮನವಿ ಸಲ್ಲಿಸಿದರು.