ರಬಕವಿ/ಬನಹಟ್ಟಿ: ಉತ್ತರ ಕರ್ನಾಟಕದ ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ತಾಲೂಕಿನ ಬಂಡಿಗಣಿ ಬಸವಗೋಪಾಲ ನೀಲಮಾಣಿಕ ಮಠದ ಶ್ರೀಗಳಾದ ಅನ್ನದಾನೇಶ್ವರ ನಿಗೂಢ ಸಾವಿನ ಪ್ರಕರಣ ಇದೀಗ ನ್ಯಾಯಾಲಯದ ಮೆಟ್ಟಿಲೇರಿದ್ದು, ತನಿಖೆ ನಿರ್ಣಾಯಕ ಹಂತ ತಲುಪುವ ನಿರೀಕ್ಷೆ ಮೂಡಿಸಿದೆ.
ಲಕ್ಷಾಂತರ ಭಕ್ತರನ್ನು ಹೊಂದಿರುವ ಮಠದ ಶ್ರೀಗಳ ಸಾವಿನ ಸುತ್ತ ಎದ್ದಿರುವ ಅನುಮಾನಗಳಿಗೆ ಉತ್ತರ ಸಿಗಲಿದೆಯೇ ಎಂಬ ಕುತೂಹಲ ಭಕ್ತ ವಲಯದಲ್ಲಿ ಮೂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬನಹಟ್ಟಿ ಪೊಲೀಸರು ಶಿವಾನಂದ ಹಿರೇಮಠ, ಅಲ್ಲಪ್ಪ ಗಣೇಶವಾಡಿ, ಹನಮಂತ ಚೌಗಲೆ ಸೇರಿ ಒಟ್ಟು 19 ಮಂದಿ ವಿರುದ್ಧ ಸೆ.17ರಂದು ಎಫ್ಐಆರ್ ದಾಖಲಿಸಿದ್ದಾರೆಂದು ದೂರುದಾರರು ತಿಳಿಸಿದ್ದಾರೆ.
2025ರ ನವೆಂಬರ್ 25ರಂದು ತೀವ್ರ ಅಸ್ವಸ್ಥಗೊಂಡಿದ್ದ ಶ್ರೀಗಳನ್ನು ಜಮಖಂಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೂಕ್ತ ಚಿಕಿತ್ಸೆ ಪಡೆಯಲು ಅಡ್ಡಿಪಡಿಸಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡು ಬಂದಿದ್ದಲ್ಲದೆ, ಕುಟುಂಬದವರಿಗೂ ಭೇಟಿಗೆ ಅವಕಾಶ ನೀಡಿರಲಿಲ್ಲ ಎಂಬ ಗಂಭೀರ ಆರೋಪಗಳನ್ನು ದೂರುದಾರರು ಮಾಡಿದ್ದಾರೆ.
ಶ್ರೀಗಳ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿರುವ ಕುಟುಂಬದವರು, ಕೊಲೆ, ನಕಲಿ ಮರಣ ಪ್ರಮಾಣಪತ್ರ ಸೃಷ್ಟಿ, ಸಾಕ್ಷಿಗಳ ನಾಶ ಹಾಗೂ ಮಠದ ಬೆಲೆ ಬಾಳುವ ವಸ್ತುಗಳ ಕಳವು ಸೇರಿ ವಿವಿಧ ಆರೋಪಗಳ ಕುರಿತು ಖಾಸಗಿ ದೂರು ಸಲ್ಲಿಸಿದ್ದರು. ಈ ಆರೋಪಗಳು ತನಿಖೆ ಮತ್ತು ನ್ಯಾಯಾಲಯದ ವಿಚಾರಣೆಯಲ್ಲಿ ಸಾಬೀತಾಗಬೇಕಿವೆ.
ನ್ಯಾಯಾಲಯದ ನಿರ್ದೇಶನದಂತೆ ದಾಖಲಾದ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103 (ಕೊಲೆ) ಮತ್ತು 238 (ಸಾಕ್ಷಿ ನಾಶ) ಸೇರ್ಪಡೆಗೆ ಸೆ. 22ರಂದು ಅನುಮತಿ ದೊರೆತಿದೆ. ಪ್ರಕರಣದ ಮುಂದಿನ ತನಿಖೆ ನಡೆಸಿ ವರದಿ ಸಲ್ಲಿಸಲು ನ್ಯಾಯಾಲಯ ನವೆಂಬರ್ 5ರಂದು ಗಡುವು ನಿಗದಿಪಡಿಸಲಾಗಿದೆ.
ಕೊಲೆ ಮತ್ತು ಸಾಕ್ಷಿ ನಾಶದಂತಹ ಗಂಭೀರ ಆರೋಪಗಳು ಪ್ರಕರಣಕ್ಕೆ ಹೊಸ ಆಯಾಮ ನೀಡಿದ್ದು, ತನಿಖಾಧಿಕಾರಿಗಳ ಮುಂದಿನ ನಡೆ ಕುತೂಹಲ ಕೆರಳಿಸಿದೆ. ಶ್ರೀಗಳ ಸಾವಿನ ಹಿಂದಿನ ನೈಜ ಕಾರಣವೇನು? ಸಾವಿನ ಸುತ್ತ ಕೇಳಿ ಬಂದಿರುವ ಅನುಮಾನಗಳಿಗೆ ತನಿಖೆಯಲ್ಲಿ ಉತ್ತರ ಸಿಗಲಿದೆಯೇ? ಎಂಬ ಪ್ರಶ್ನೆಗಳಿಗೆ ತನಿಖೆಯೇ ಉತ್ತರ ನೀಡಬೇಕಿದೆ.
ಮಠದ ಶ್ರೀಗಳ ಸಾವಿನ ಪ್ರಕರಣದಲ್ಲಿ ಕೇಳಿ ಬಂದಿರುವ ಆರೋಪಗಳು ಸತ್ಯವೇ, ಅಸತ್ಯವೇ ಎಂಬುದು ತನಿಖೆ ಮತ್ತು ನ್ಯಾಯಾಂಗ ವಿಚಾರಣೆಯಿಂದ ಸ್ಪಷ್ಟವಾಗಬೇಕಿದೆ. ನ. 5ರೊಳಗೆ ಸಲ್ಲಿಕೆಯಾಗಲಿರುವ ಮುಂದಿನ ತನಿಖಾ ವರದಿ ಪ್ರಕರಣದ ಮುಂದಿನ ಬೆಳವಣಿಗೆಗೆ ಮಹತ್ವದ ಘಟ್ಟವಾಗುವ ನಿರೀಕ್ಷೆಯಿದೆ.