ಜಮಖಂಡಿ ಬಸವ ಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಯುವ ಸಂಸತ್ತು ಸ್ಪರ್ಧೆ ಕಾರ್ಯಕ್ರಮವನ್ನು ಪ್ರಾಚಾರ್ಯ ಡಾ. ಟಿ.ಪಿ. ಗಿರಡ್ಡಿ ಉದ್ಘಾಟಿಸಿದರು. ಮಹಾಂತೇಶ ಚವಾಣ್, ನರಸಿಂಹ ಕಲ್ಲೋಳ್ಳಿ, ಮಹಾಂತೇಶ ನರಸನಗೌಡ್ರ, ಎಸ್.ಕೆ. ಕರಡಿ, ಪಿ.ಐ. ಹೊಸಮಠ ಇತರರಿದ್ದರು. 
ಬಾಗಲಕೋಟೆ

ಪ್ರಜಾಪ್ರಭುತ್ವ ಅರಿವಿಗೆ ಯುವ ಸಂಸತ್ತು ಸ್ಪರ್ಧೆ ಸಹಕಾರಿ

ಪ್ರಾಚಾರ್ಯ ಡಾ. ಟಿ.ಪಿ. ಗಿರಡ್ಡಿ ಹೇಳಿಕೆ

ಜಮಖಂಡಿ : ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು ಹಾಗೂ ಸಂಸದೀಯ ಕಾರ್ಯವೈಖರಿ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ತಾಲೂಕು ಮಟ್ಟದ ಯುವ ಸಂಸತ್ತು ಸ್ಪರ್ಧೆ ಸಹಕಾರಿಯಾಗಿದೆ ಎಂದು ಪ್ರಾಚಾರ್ಯ ಡಾ. ಟಿ.ಪಿ. ಗಿರಡ್ಡಿ ಹೇಳಿದರು.

ನಗರದ ಬಸವ ಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟೆ, ತಾಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಜಮಖಂಡಿ ಅವುಗಳ ಆಶ್ರಯದಲ್ಲಿ ಪ್ರೌಢಶಾಲಾ ಮಕ್ಕಳಿಗಾಗಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ಯುವ ಸಂಸತ್ತು ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಸಂಸತ್ತು ಸ್ಪರ್ಧೆಯ ಮೂಲಕ ಸಭಾಧ್ಯಕ್ಷರು, ಸಭಾಪತಿ, ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು, ಸಚಿವರು ಹಾಗೂ ಮಾರ್ಷಲ್‌ಗಳ ಜವಾಬ್ದಾರಿಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅರಿವು ಮೂಡಿಸಲಾಗುತ್ತದೆ. ಪ್ರಶ್ನೋತ್ತರ ಅವಧಿ, ಶೂನ್ಯ ವೇಳೆ ಮತ್ತು ಮಸೂದೆ ಮಂಡನೆ ಸೇರಿ ಸಂಸದೀಯ ಕಲಾಪಗಳ ಪರಿಚಯವೂ ದೊರೆಯಲಿದೆ ಎಂದು ಗಿರಡ್ಡಿ ಹೇಳಿದರು.

ಜಿ.ಜಿ.ಪ.ಪೂ. ಕಾಲೇಜಿನ ಉಪ ಪ್ರಾಂಶುಪಾಲ ಮಹಾಂತೇಶ ನರನಗೌಡ್ರ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ನರಸಿಂಹ ಕಲ್ಲೋಳ್ಳಿ, ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಸ್.ಕೆ. ಕರಡಿ, ಶಿಕ್ಷಕ ಸುಖದೇವ ಬಿದರಿ, ಮುಖ್ಯ ಶಿಕ್ಷಕ ಪಿ.ಐ. ಹೊಸಮಠ ಇದ್ದರು.

ಶ್ರಾವಣಿ ಹಿರೇಮಠ ಪ್ರಾರ್ಥನೆ ಗೀತೆ ಹಾಡಿದರು. ಶಿಕ್ಷಕಿ ಅಶ್ವಿನಿ ಖಟಾವಕರ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಮಹಾಂತೇಶ ಚವಾಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸಂಗಮೇಶ ಪಾಟೀಲ ನಿರೂಪಿಸಿದರು.