ಬಾಗಲಕೋಟೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆ ಕುರಿತು ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಸಂಗಪ್ಪ ಎಂ. ಮಾತನಾಡಿದರು. ಜಿ.ಪಂ. ಸಿಇಒ ಗಜಾನನ ಬಾಲೆ, ಅಪರ ಜಿಲ್ಲಾಧಿಕಾರಿ ಮಂಜುನಾಥ ಡೋಂಬರ, ಉಪ ವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಂಡಲೀಕ ಕಾಂಬಳೆ ಇದ್ದರು. 
ಬಾಗಲಕೋಟೆ

ಪಾರದರ್ಶಕ ಪರೀಕ್ಷೆ ನಡೆಸಲು ಸೂಕ್ತ ಕ್ರಮ

ಜಿಲ್ಲಾಧಿಕಾರಿ ಸಂಗಪ್ಪ ಎಂ. ಸೂಚನೆ ಭಾನುವಾರ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಪರೀಕ್ಷೆ

ಬಾಗಲಕೋಟೆ: ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ನ. 15ರಂದು ನಡೆಯಲಿರುವ ಗೆಜೆಟೆಡ್ ಪ್ರೋಬೆಷನರ್ಸ್‌ ‘ಎ’ ಮತ್ತು ‘ಬಿ’ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಜಿಲ್ಲೆಯಲ್ಲಿ ಯಾವುದೇ ಲೋಪ ದೋಷಗಳು ಇಲ್ಲದಂತೆ ಪಾರದರ್ಶಕ ಹಾಗೂ ಸುಸೂತ್ರವಾಗಿ ನಡೆಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಎಂ. ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆ ಕುರಿತು ಪೂರ್ವ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು 16 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 7362 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಮೂಲ ಸೌಕರ್ಯ, ಕುಡಿಯುವ ನೀರು, ವಿದ್ಯುತ್, ಆಸನ ವ್ಯವಸ್ಥೆ ಹಾಗೂ ಶೌಚಗೃಹ ಸೇರಿ ಅಗತ್ಯ ವ್ಯವಸ್ಥೆ ಸಮಪರ್ಕವಾಗಿ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಪರೀಕ್ಷಾ ಕೇಂದ್ರಗಳಲ್ಲಿ ಆಗಮಿಸುವ ಅಭ್ಯರ್ಥಿಗಳನ್ನು ಪ್ರಿಸ್ಕಿಂಗ್ ಮೂಲಕ ಕಟ್ಟುನಿಟ್ಟಾಗಿ ತಪಾಸಣೆ ನಡೆಸಬೇಕು. ಅಭ್ಯರ್ಥಿಗಳ ತಪಾಸಣೆ ಸಂದರ್ಭದಲ್ಲಿ ಪರೀಕ್ಷಾ ಆಯೋಗದ ಮಾರ್ಗಸೂಚಿ ಹಾಗೂ ಗೌಪ್ಯತೆಯ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ, ತಪಾಸಣೆ ಪ್ರಕ್ರಿಯೆ ಸುಗಮವಾಗಿ ನಡೆಸಲು ಅಗತ್ಯ ಸಿಬ್ಬಂದಿ ನಿಯೋಜಿಸಿ ಪರೀಕ್ಷಾ ಕೇಂದ್ರಗಳಲ್ಲಿ ಅನಗತ್ಯ ವಿಳಂಬವಾಗದಂತೆ ನೋಡಿಕೊಳ್ಳಬೇಕು. ಪರೀಕ್ಷಾ ಕೇಂದ್ರದಲ್ಲಿ ಜಾಮರ್ ಸಹ ಅಳವಡಿಕೆ ಮಾಡಲಾಗುತ್ತಿದೆ. ಪರೀಕ್ಷಾ ಪ್ರಕ್ರಿಯೆ ವೀಕ್ಷಣೆಗೆ ಜಿಲ್ಲಾ ಕೇಂದ್ರದಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪರೀಕ್ಷಾರ್ಥಿಗಳು ತಮ್ಮ ಪ್ರವೇಶ ಪತ್ರದೊಂದಿಗೆ ಭಾವಚಿತ್ರವಿರುವ ಗುರುತಿನ ಚೀಟಿ ತರುವುದು ಕಡ್ಡಾಯವಾಗಿದೆ. ಅಭ್ಯರ್ಥಿಗಳ ಪರಿಶೀಲನೆಗಾಗಿ ಪ್ರಿಸ್ಕಿಂಗ್ ಕಾರ್ಯ ನಡೆಸಲಾಗುತ್ತಿದ್ದು, ತಪಾಸಣೆ ಮಾಡುವ ಸಿಬ್ಬಂದಿಗಳು ಬೆಳಗ್ಗೆ 8 ಗಂಟೆಗೆ ಮತ್ತು ಮಧ್ಯಾಹ್ನ 12 ಗಂಟೆಗೆ ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಹಾಜರಿದ್ದು, ಮೊಬೈಲ್ ಬಳಕೆ ಮಾಡದಂತೆ ಸೂಚಿಸಬೇಕು. ಧಾರ್ಮಿಕ ಆಚರಣೆಗೆ ಸಂಬಂಧಿಸಿದ ವಸ್ತುಗಳನ್ನು ಧರಿಸಿ ಬರುವ ಅಭ್ಯರ್ಥಿಗಳು ಮತ್ತು ಹಿಯರಿಂಗ್ ಏಡ್ ಉಪಕರಣ ಧರಿಸಿ ಬರುವ ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ 2.30 ಗಂಟೆ ಮುಂಚಿತವಾಗಿ ತಪಾಸಣೆಗೆ ಒಳಪಡಬೇಕು ಎಂದರು.

ಪರೀಕ್ಷಾ ಕೇಂದ್ರದ ಮೇಲ್ವಿಚಾರಣೆಗಾಗಿ 4 ಜನ ವೀಕ್ಷಕರು, ಪ್ರಶ್ನೆ ಪತ್ರಿಕೆ ಸಾಗಾಣಿಕೆಗಾಗಿ 5 ಮಾರ್ಗಾಧಿಕಾರಿಗಳ ತಂಡ ರಚನೆ, ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ನೋಡಲ್ ಅಧಿಕಾರಿ, 16 ಪ್ರಶ್ನೆ ಪತ್ರಿಕೆ ಪಾಲಕರನ್ನು ಹಾಗೂ 16 ಜನ ವಸಸಂಹಿತೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರಶ್ನೆ ಪತ್ರಿಕೆಗಳನ್ನು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಿಸುವ ಕಾರ್ಯವಾಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಜಿ.ಪಂ. ಸಿಇಒ ಗಜಾನನ ಬಾಲೆ, ಅಪರ ಜಿಲ್ಲಾಧಿಕಾರಿ ಮಂಜುನಾಥ ಡೋಂಬರ, ಉಪ ವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಂಡಲೀಕ ಕಾಂಬಳೆ, ಖಜಾನೆ ಇಲಾಖೆ ಉಪ ನಿರ್ದೇಶಕ ಶರಣಬಸಪ್ಪ ಕುಂಬಾರ, ತಹಸೀಲ್ದಾರ ವಾಸುದೇವ ಸ್ವಾಮಿ ಸೇರಿ ಪರೀಕ್ಷಾ ಮುಖ್ಯ ಅಧೀಕ್ಷಕರು ಉಪಸ್ಥಿತರಿದ್ದರು.

ಪರೀಕ್ಷೆಗೆ ನಿಷೇಧಿತ ವಸ್ತುಗಳು ಪರೀಕ್ಷಾ ಕೇಂದ್ರದ ಮುಖ್ಯ ದ್ವಾರದಲ್ಲಿಯೇ ಮೊಬೈಲ್ ಹಾಗೂ ಸ್ಮಾರ್ಟ್‌ಫೋನ್, ಸ್ಮಾರ್ಟ್ ವಾಚ್, ಬ್ಲೂಟೂತ್, ಪೇಜರ್, ವೈರ‌್ಲೆಸ್, ಕ್ಯಾಲ್ಕೂಲೇಟರ್ ಇತರೆ ಮೊದಲಾದ ಇಲೆಕ್ಟ್ರಾನಿಕ್ಸ್ ಉಪಕರಣಗಳು, ಆಹಾರ ಪದಾರ್ಥ, ನೀರಿನ ಬಾಟಲ್, ಪಾನೀಯ ಬಾಟಲ್‌ಗಳು, ಬರೆದಿಟ್ಟುಕೊಂಡಿರುವ ಅಥವಾ ಪ್ರಿಂಟ್ ಇರುವ ಚೀಟಿಗಳು, ಪುಸ್ತಕಗಳು, ಜಾಮಿಟ್ರಿ ಬಾಕ್ಸ್, ಪೆನ್ಸಿಲ್, ಪ್ಲಾಸ್ಟಿಕ್ ಪೌಚ್, ಸ್ಕೇಲ್, ಬರೆಯುವ ಪೇಪರ್, ಇರೇಸರ್, ಲಾಗ್ ಟೇಬಲ್ ಇತ್ಯಾದಿ, ಶೂಗಳು, ಬೂಟ್ಸ್ ಕ್ಯಾಪ್, ಕಿವಿ, ತಲೆ ಮತ್ತು ಮುಖ ಮುಚ್ಚುವಂತಹ ಯಾವುದೇ ಉಡುಪುಗಳು, ಬ್ಯಾಗ್, ಪರ್ಸ್, ಹೆಚ್ಚು ಜೇಬುಗಳಿರುವ ಜೀನ್ಸ್ ಪ್ಯಾಂಟ್ ಧರಿಕೊಂಡು ಬರುವುದನ್ನು ನಿಷೇಧಿಸಲಾಗಿದೆ.
ಪುರುಷರು ಜನಿವಾರ, ಉಡದಾರ, ಮಹಿಳೆಯರು ಮಾಂಗಲ್ಯ ಸರ, ಕೈಬಳೆಗಳು, ಮೂಗುತಿ, ಕಾಲುಂಗುರ, ಕಾಲುಗೆಜ್ಜೆ, ಕುಂಕುಮ, ಹಣೆಬಟ್ಟು, ಎಲ್ಲ ಅಭ್ಯರ್ಥಿಗಳಿಗೆ ಕೈಗೆ ಕಟ್ಟುವ ಧಾರ್ಮಿಕ ಕ್ಷೇತ್ರದ ದಾರಗಳು, ಶಿವದಾರ, ಶಿವಲಿಂಗ, ಉಂಗುರ, ತಾಯತ, ರುದ್ರಾಕ್ಷಿಗಳನ್ನು ಧರಿಸಿಕೊಂಡು ಬರಬಹುದು. ಕೆಲವು ಸಮುದಾಯದ ಅಭ್ಯರ್ಥಿಗಳು ಧಾರ್ಮಿಕ ಉಡುಪುಗಳನ್ನು ಧರಿಸಿಕೊಂಡು ಪರೀಕ್ಷೆ ಬರೆಯಲು ಬಯಸಿದರೆ ಪರೀಕ್ಷೆ ಆರಂಭದ ಮುಂಚೆ 2.30 ಗಂಟೆ ಮುಂಚಿತವಾಗಿ ವಸ ಸಂಹಿತೆ ಅಧಿಕಾರಿ ಎದುರು ಹಾಜರಾಗಿ ತಪಾಸಣೆಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಎಂ. ತಿಳಿಸಿದ್ದಾರೆ.