ಬಾದಾಮಿ: ಹವಾಮಾನ ವೈಪರೀತ್ಯ, ಬರಗಾಲ ಹಾಗೂ ಪರಿಸರ ಅಸಮತೋಲನದಂತ ಸಮಸ್ಯೆಗಳನ್ನು ತಡೆಯಲು ಹಸಿರೀಕರಣವೇ ಪ್ರಮುಖ ಪರಿಹಾರ. ಪ್ರತಿಯೊಬ್ಬ ನಾಗರಿಕರೂ ಕನಿಷ್ಠ ಒಂದು ಗಿಡವನ್ನು ನೆಟ್ಟು ಅದನ್ನು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಕರೆ ನೀಡಿದರು.
ತಾಲೂಕಿನ ಸುಕ್ಷೇತ್ರ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಹಳೆ ಮಹಾಕೂಟ ಪ್ರದೇಶದಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆ, ನಿಸರ್ಗ ಬಳಗ ಪರಿಸರ ವೇದಿಕೆ ಹಾಗೂ ಮಹಾಕೂಟ ಟ್ರಸ್ಟ್ ಅವರ ಸಂಯುಕ್ತಾಶ್ರಯದಲ್ಲಿ ಜ್ಯೂಸ್ ಬಿಲ್ವಪತ್ರೆ ಸಸಿಗಳನ್ನು ನೆಡುವ ಮೂಲಕ ಪತ್ರಿವನ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಿಸರ್ಗ ಬಳಗ ಪರಿಸರ ವೇದಿಕೆ ಅಧ್ಯಕ್ಷ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಉಪನ್ಯಾಸಕ ಎಸ್.ಎಚ್. ವಾಸನ ಮಾತನಾಡಿ, ರೈತರು ಮಳೆ ಆಶ್ರಿತ ಹಾಗೂ ನೀರಾವರಿ ಜಮೀನುಗಳಲ್ಲಿ ಬಿಲ್ವಪತ್ರೆ ಬೆಳೆಯಲು ಮುಂದಾಗಬೇಕು. ಉತ್ತಮ ಗುಣಮಟ್ಟದ ಬಿಲ್ವಪತ್ರೆ ಸಸಿಗಳು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಲಭ್ಯವಿದ್ದು, ಆಸಕ್ತ ರೈತರು ಅದರ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.
ಮಹಾಕೂಟ ಟ್ರಸ್ಟ್ ಅಧ್ಯಕ್ಷ ಕುಮಾರಗೌಡ ಜನಾಲಿ ಮಾತನಾಡಿ, ಪತ್ರಿವನ ನಿರ್ಮಾಣಕ್ಕೆ ತಂತಿ ಬೇಲಿ ನಿರ್ಮಿಸಿ ವಿಶೇಷ ಆಸಕ್ತಿ ತೋರಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದ ನಿಸರ್ಗ ಬಳಗದ ಸದಸ್ಯರು ಕಾರ್ಯ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಮಹಾಕೂಟ ಪ್ರದೇಶವನ್ನು ಹಸಿರು ಪರಿಸರದ ಮಾದರಿ ತಾಣವನ್ನಾಗಿ ರೂಪಿಸುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.
ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿ ರಂಗನಾಥ ಹೊಸಮನಿ ಹಾಗೂ ಸಿಬ್ಬಂದಿ, ಮಹಾಕೂಟ ಟ್ರಸ್ಟ್ ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.