ಜಮಖಂಡಿ: ಧರ್ಮವೆಂದರೆ ಕೇವಲ ಪೂಜೆ, ಸಂಪ್ರದಾಯ ಮತ್ತು ಆಚರಣೆಗಳಿಗೆ ಸೀಮಿತವಲ್ಲ. ಮಾತಿನಲ್ಲಿ ಸತ್ಯ, ನಡವಳಿಕೆಯಲ್ಲಿ ಪ್ರಾಮಾಣಿಕತೆ ಹಾಗೂ ಬದುಕಿನಲ್ಲಿ ಪರೋಪಕಾರವನ್ನು ಅಳವಡಿಸಿಕೊಳ್ಳುವುದೇ ನಿಜವಾದ ಧರ್ಮ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ನಗರದ ಕಡಪಟ್ಟಿ ಬಸವಣ್ಣ ದೇವಸ್ಥಾನದ ಆವರಣದಲ್ಲಿ ಮಾನವ ಧರ್ಮ ಮಂಟಪದಲ್ಲಿ ಬಾಳೆಹೊನ್ನೂರು ರಂಭಾಪುರಿ ಮಹಾಪೀಠದ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ನೇತೃತ್ವದಲ್ಲಿ ನಡೆದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ‘ಶುಬೋಧ ಚಿಂತನ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ದಸರಾ ದುಷ್ಟಶಕ್ತಿಗಳ ವಿರುದ್ಧ ಶಿಷ್ಟಶಕ್ತಿಗಳು ವಿಜಯ ಸಾಧಿಸಿದ ಸಂಕೇತ. ನಮ್ಮೊಳಗಿನ ಅಹಂಕಾರ, ಸ್ವಾರ್ಥ, ದ್ವೇಷ ಮತ್ತು ಅಸೂಯೆಗಳನ್ನು ಗೆಲ್ಲುವುದೇ ನಿಜವಾದ ವಿಜಯ. ನಮ್ಮ ಧರ್ಮ ಮತ್ತು ಪರಂಪರೆಯ ಬಗ್ಗೆ ಅಭಿಮಾನ ಹೊಂದುವುದರ ಜೊತೆಗೆ ಧಾರ್ಮಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಧರ್ಮಸಭೆಗಳು ಅರ್ಥಪೂರ್ಣವಾಗುತ್ತವೆ ಎಂದರು.
ತಾಯಿ ತನ್ನ ನೋವುಗಳನ್ನು ಮರೆಮಾಚಿ ಕುಟುಂಬದ ಸಂತೋಷಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾಳೆ. ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮನ್ನು ಬೆಳೆಸಿದ ತಾಯಿಯನ್ನು ಮರೆಯಬಾರದು. ಶರನ್ನವರಾತ್ರಿಯಲ್ಲಿ ಜಗನ್ಮಾತೆಯ ವಿವಿಧ ಸ್ವರೂಪಗಳನ್ನು ಆರಾಧಿಸುವುದರ ಜೊತೆಗೆ ತಾಯಂದಿರನ್ನು ಗೌರವಿಸುವ ಸಂಸ್ಕೃತಿಯನ್ನೂ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ರೈತನ ಕಣ್ಣಲ್ಲಿ ನೀರಿದ್ದರೆ ಸಮಾಜದಲ್ಲಿ ಯಾರೂ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ರೈತರ ಬದುಕು ಹಸನಾಗಲು ಭಗವಂತನ ಕೃಪೆ ಹಾಗೂ ಜಗದ್ಗುರುಗಳ ಆಶೀರ್ವಾದ ಅಗತ್ಯವಾಗಿದೆ. ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳ ಪಂಗಡಗಳು ಭೇದ-ಭಾವ ಮರೆತು ಒಂದಾಗಿ ಸಮಾಜದ ಹಾಗೂ ನಾಡಿನ ಹಿತಕ್ಕಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು 2047ರ ವೇಳೆಗೆ ಭಾರತವನ್ನು ಅಭಿವದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಸಂಕಲ್ಪ ಹೊಂದಿದ್ದು, ದೇಶದ ಯುವಶಕ್ತಿಯ ಮೇಲೆ ವಿಶ್ವಾಸವಿಟ್ಟಿದ್ದಾರೆ. ಯುವಕರು ಆಲಸ್ಯ, ಅಹಂಕಾರ ಮತ್ತು ದುಶ್ಚಟಗಳನ್ನು ತ್ಯಜಿಸಿ ಸಕಾರಾತ್ಮಕ ಚಿಂತನೆಗಳೊಂದಿಗೆ ಮುನ್ನಡೆಯಬೇಕು. ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವ ಜನರ ಮೇಲಿದೆ ಎಂದು ಹೇಳಿದರು.
ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಶಾಸಕ ನಾಡೋಜ ಜಗದೀಶ ಗುಡಗುಂಟಿ, ಸಂಸದ ಪಿ. ಸಿ. ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಹಲವಾರು ಗಣ್ಯರು, ಭಕ್ತರು ಉಪಸ್ಥಿತರಿದ್ದರು.