ಜಮಖಂಡಿಯಲ್ಲಿ ನಡೆದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಶಿವಮೊಗ್ಗದ ಆಸರೆ ಟ್ರಸ್ಟ್ ಅಧ್ಯಕ್ಷ ಹಾಗೂ ಪತ್ರಕರ್ತ ಕೆ.ಎಂ. ಸತೀಶಗೌಡ ಅವರಿಗೆ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಸಾಧನ ಸಿರಿ ಪ್ರಶಸ್ತಿ ಪ್ರದಾನ ಮಾಡಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಆನಂದ ನ್ಯಾಮಗೌಡ ಇದ್ದರು. 
ಬಾಗಲಕೋಟೆ

ದೇಶದ ಅಭ್ಯುದಯಕ್ಕೆ ಯೋಧರ ನಿಷ್ಠೆ-ರೈತರ ಶ್ರಮ ಅಮೂಲ್ಯ

ರಂಭಾಪುರಿ ಜಗದ್ಗುರುಗಳ ಅಭಿಪ್ರಾಯ ಪತ್ರಕರ್ತ ಕೆ.ಎಂ. ಸತೀಶಗೌಡಗೆ ಸಾಧನ ಸಿರಿ ಪ್ರಶಸ್ತಿ ಪ್ರದಾನ

ಜಮಖಂಡಿ: ದೇಶದ ಪ್ರಗತಿ ಕೇವಲ ಸರ್ಕಾರದಿಂದ ಸಾಧ್ಯವಿಲ್ಲ. ಸೈನಿಕರು, ರೈತರು, ಶಿಕ್ಷಕರು, ಕಾರ್ಮಿಕರು, ವಿಜ್ಞಾನಿಗಳು, ವೈದ್ಯರು ಹಾಗೂ ಉದ್ಯಮಿಗಳ ಪರಿಶ್ರಮ ಮತ್ತು ಸಾಧನೆ ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅದರಲ್ಲೂ ಯೋಧರ-ರೈತರ ಕೊಡುಗೆ ಅಮೂಲ್ಯ ಎಂದು ಬಾಳೆಹೊನ್ನೂರು ರಂಭಾಪುರಿ ಮಹಾಪೀಠದ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ನಗರದ ಸಮೀಪದ ಕಡಪಟ್ಟಿ ಬಸವಣ್ಣ ದೇವಸ್ಥಾನದ ಆವರಣದಲ್ಲಿರುವ ಮಾನವ ಧರ್ಮ ಮಂಟಪದಲ್ಲಿ ಗುರುವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಅವರು ಆಶೀರ್ವಚನ ನೀಡಿ, ಜೀವನದಲ್ಲಿ ಉನ್ನತ ಸ್ಥಾನ ಗಳಿಸುವುದು ಉತ್ತಮ. ಆದರೆ ಸಾಧನೆಯ ಹಾದಿಯಲ್ಲಿ ಮಾನವೀಯತೆ ಕಳೆದುಕೊಳ್ಳಬಾರದು. ಹಣ ಸಂಪಾದಿಸುವುದು ಸಾಧನೆಯಲ್ಲ. ಗುರಿ, ಶಿಸ್ತು, ಜ್ಞಾನ, ಆತ್ಮವಿಶ್ವಾಸ ಮತ್ತು ಪ್ರಾಮಾಣಿಕತೆಯೊಂದಿಗೆ ನಿರಂತರ ಪ್ರಯತ್ನಿಸುವುದೇ ನಿಜವಾದ ಸಾಧನೆ ಎಂದರು.

ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುವ ಸೈನಿಕರ ಧೈರ್ಯ, ಶಿಸ್ತು ಮತ್ತು ದೇಶಭಕ್ತಿ ಎಲ್ಲರಿಗೂ ಆದರ್ಶವಾಗಿದೆ. ಆಹಾರ ಉತ್ಪಾದನೆ, ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣ ಜೀವನದ ನಿರ್ವಹಣೆಯಲ್ಲಿ ರೈತರ ಪಾತ್ರ ದೊಡ್ಡದಾಗಿದೆ. ಯೋಧರ ನಿಷ್ಠೆ ಮತ್ತು ರೈತರ ಶ್ರಮ ಎಷ್ಟು ಕೊಂಡಾಡಿದರೂ ಕಡಿಮೆಯೇ ಎಂದು ತಿಳಿಸಿದರು.

ಎಮ್ಮಿಗನೂರು ಹಂಪಿ ಸಾವಿರದೇವರಮಠದ ವಾಮದೇವ ಮಹಾಂತ ಶಿವಾಚಾರ್ಯರು ಉಪನ್ಯಾಸ ನೀಡಿದರು. ಶಿವಮೊಗ್ಗದ ಆಸರೆ ಟ್ರಸ್ಟ್ ಅಧ್ಯಕ್ಷ ಹಾಗೂ ಪತ್ರಕರ್ತ ಕೆ.ಎಂ. ಸತೀಶಗೌಡ ಅವರಿಗೆ ರಂಭಾಪುರಿ ಜಗದ್ಗುರುಗಳು ಸಾಧನ ಸಿರಿ ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದರು. ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು ಪ್ರಶಸ್ತಿ ವಾಚನ ಮಾಡಿದರು.

ವಿವಿಧ ಮಠಗಳ ರೇಣುಕ ಶಿವಾಚಾರ್ಯರು, ಗುರುಪಾದ ಶಿವಾಚಾರ್ಯರು, ಮಲ್ಲಿಕಾರ್ಜುನ ಶಿವಾಚಾರ್ಯರು, ನಾಗಭೂಷಣ ಶಿವಾಚಾರ್ಯರು, ಗೌರಿಶಂಕರ ಶಿವಾಚಾರ್ಯರು, ವೀರಭದ್ರ ಶಿವಾಚಾರ್ಯರು, ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ಹಾಗೂ ಡಾ. ವಿಶ್ವಪ್ರಭುದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಆನಂದ ನ್ಯಾಮಗೌಡ ಇದ್ದರು. ನಾಗಮ್ಮ ಹಿರೇಮಠ ಸ್ವಾಗತಿಸಿದರು. ಶಾಂತಾ ಆನಂದ ಹಾಗೂ ರಘು ಹಿರೇಮಠ ನಿರೂಪಿಸಿದರು.