ಮುಧೋಳದ ಸಂಗೊಳ್ಳಿ ರಾಯಣ್ಣ ವೃತ್ತದ ರಮೇಶ ಗಡದನ್ನವರ ವೇದಿಕೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ ಮಾತನಾಡಿದರು. ಎಸ್‌ಪಿ ಸಿದ್ಧಾರ್ಥ ಗೋಯಲ್, ರೈತರು ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು. 
ಬಾಗಲಕೋಟೆ

ಟನ್ ಕಬ್ಬಿಗೆ 3,800 ರೂ., ದರ ಘೋಷಣೆ

ರೈತರ ಹೋರಾಟಕ್ಕೆ ಜಯ ಆರು ದಿನಗಳ ಅನಿರ್ದಿಷ್ಟಾವಧಿ ಧರಣಿ ಅಂತ್ಯ ಸಂಧಾನ ಸಭೆಯಲ್ಲಿ ಕಾರ್ಖಾನೆಗಳ ಒಪ್ಪಿಗೆ

ಮುಧೋಳ: ನಗರದ ವಿಜಯಪುರ-ಬೆಳಗಾವಿ ರಾಜ್ಯ ಹೆದ್ದಾರಿಯ ಸಂಗೊಳ್ಳಿ ರಾಯಣ್ಣ ವೃತ್ತದ ರಮೇಶ ಗಡದನ್ನವರ ವೇದಿಕೆಯಲ್ಲಿ ಕಳೆದ ಆರು ದಿನಗಳಿಂದ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಬಾಗಲಕೋಟೆ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಯಶಸ್ವಿಯಾಗಿ ಅಂತ್ಯಗೊಂಡಿತು.

ಗುರುವಾರ ನಡೆದ ಸಂಧಾನ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ 3,800 ರೂ. ದರ ನೀಡಲು ಉತ್ತೂರಿನ ಐಸಿಪಿಎಲ್, ಸಿದ್ದಾಪುರದ ಪ್ರಭುಲಿಂಗೇಶ್ವರ, ಮುಧೋಳದ ನಿರಾಣಿ ಹಾಗೂ ಸಮೀರವಾಡಿಯ ಸೋಮಯ್ಯ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಒಪ್ಪಿಗೆ ಸೂಚಿಸಿ ಅಧಿಕೃತವಾಗಿ ಘೋಷಿಸಿದರು. ಇದರೊಂದಿಗೆ ಕಬ್ಬು ಬೆಳೆಗಾರರ ಹೋರಾಟಕ್ಕೆ ಮಹತ್ವದ ಜಯ ಲಭಿಸಿದಂತಾಗಿದೆ.

ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಯ ಪ್ರತಿನಿಧಿಗಳ ನಡುವೆ ಸುದೀರ್ಘ ಚರ್ಚೆ ನಡೆಯಿತು. ಅಂತಿಮವಾಗಿ ರೈತರ ಬೇಡಿಕೆಗೆ ಸ್ಪಂದಿಸಿದ ಕಾರ್ಖಾನೆಗಳ ಪ್ರತಿನಿಧಿಗಳು ವೇದಿಕೆ ಮೇಲೆಯೇ ಪ್ರತಿ ಟನ್ ಕಬ್ಬಿಗೆ 3,800 ರೂ. ದರ ನೀಡುವುದಾಗಿ ಘೋಷಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಮಾತನಾಡಿ, ಯಾವುದೇ ಅಹಿತಕರ ಘಟನೆ ನಡೆಯದೆ ಹೋರಾಟ ಸುಖಾಂತ್ಯಗೊಂಡಿರುವುದು ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ. ಮುಂದೆಯೂ ನಿಮ್ಮೆಲ್ಲರೊಂದಿಗೆ ಪೊಲೀಸ್ ಇಲಾಖೆ ಇರಲಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ ಮಾತನಾಡಿ, ಹೋರಾಟಕ್ಕೆ ಸಹಕಾರ ನೀಡಿದ ರೈತರು, ಸಂಘಟನೆಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದರು.

ಮುತ್ತಪ್ಪ ಕುಮಾರ, ಈರಪ್ಪ ಹಂಚಿನಾಳ, ಹನುಮಂತಗೌಡ ಪಾಟೀಲ, ದುಂಡಪ್ಪ ಯರಗಟ್ಟಿ, ಅಶೋಕ ಪಡಸಲಗಿ, ಶಿವಲಿಂಗ ಬೆಳಗಲಿ, ಮುತ್ತು ಹೊಸಕೋಟಿ, ಮಂಜು ಅರಕೇರಿ, ರಾಕೇಶ ಗಡದನ್ನವರ, ಸದಾಶಿವ ಶಂಕರಟ್ಟಿ, ಭೀಮಸಿ ನಾಗರಡ್ಡಿ ಇತರರಿದ್ದರು.

ಮುಧೋಳದ ಯಾದವಾಡ ಕ್ರಾಸ್ ಬಳಿ ಸಕ್ಕರೆ ಕಾರ್ಖಾನೆ ಆರಂಭಿಸುವಂತೆ ಒತ್ತಾಯಿಸಿ ಮತ್ತೊಂದು ಗುಂಪಿನ ರೈತರು ಪ್ರತಿಭಟನೆ ನಡೆಸಿದರು.