ಹುನಗುಂದ : ವಿಬಿ-ಜಿ ರಾಮ್-ಜಿ ಯೋಜನೆ ಅಡಿಯಲ್ಲಿ ಕೆಲಸ, ಕೂಲಿ, ನಿರುದ್ಯೋಗ, ಭತ್ಯೆ ಮತ್ತು ನಷ್ಟ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಕಾರ್ಮಿಕರು ಇಲ್ಲಿನ ತಾಲೂಕು ಪಂಚಾಯಿತಿ ಆವರಣದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ಮುಖಂಡ ಮಹಾಂತೇಶ ಹೊಸಮನಿ ಮಾತನಾಡಿ, ಕಳೆದ ಏಳು ತಿಂಗಳಿನಿಂದ ಹುನಗುಂದ -ಇಳಕಲ್ಲ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡುತ್ತಿಲ್ಲ. ವರ್ಷದಲ್ಲಿ 120 ದಿನಗಳ ಕೆಲಸ ನೀಡಬೇಕೆಂದು ಕಾನೂನು ಇದ್ದರು ಕಾರ್ಮಿಕರಿಗೆ ಸರಿಯಾಗಿ ಕೆಲಸ ನೀಡುತ್ತಿಲ್ಲ. ಬರಗಾಲದಿಂದ ತತ್ತರಿಸಿರುವ ಗ್ರಾಮೀಣ ಭಾಗದ ಜನರು ಗುಳೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಈ ಕೂಡಲೇ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಶಾಂತಾ ಕತ್ತಿ, ವಿಜಯಲಕ್ಷ್ಮೀ ಜಾಲಿಹಾಳ, ಮಂಜುನಾಥ ಹಲಕಾವಟಗಿ, ಶಾರದಾ ಪರತಗೌಡರ, ಶಶಿಕುಮಾರ ಹರಿಜನ, ಯಮನೂರ ಮಾದರ, ಮಹಾದೇವಿ ಹಡಪದ, ನೀಲಮ್ಮ ಕಟ್ಟಿಮನಿ, ವಿಜಯಲಕ್ಷ್ಮಿ ಜಾಲಿಹಾಳ ಇದ್ದರು.
ಈ ವರ್ಷ ಜು. 1ರಿಂದ ವಿಬಿ-ಜಿ ರಾಮ್-ಜಿ ಆಗಿರುವುದರಿಂದ ತಾಂತ್ರಿಕ ದೋಷದಿಂದ ಅಡೆತಡೆ ಉಂಟಾಗಿದೆ. ಪಿಡಿಒಗಳಿಂದ ಮಾಹಿತಿ ಪಡೆದು ಕೂಡಲೇ ಕೂಲಿ ಕಾರ್ಮಿಕರ ಸಮಸ್ಯೆ ಪರಿಹರಿಸಲಾಗುವುದು. ಮುರಳೀಧರ ದೇಶಪಾಂಡೆ ಇಒ ತಾ.ಪಂ. ಹುನಗುಂದ