ಬನಹಟ್ಟಿ ಮಲ್ಲಿಕಾರ್ಜುನ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಗೆ ಶಾಸಕ ಸಿದ್ದು ಸವದಿ, ಬ್ರೀಜ್‌ಮೋಹನ ಡಾಗ, ಮಲ್ಲಿಕಾರ್ಜುನ ತುಂಗಳ ಚಾಲನೆ ನೀಡಿದರು. ಶಂಕರ ಗುರೂಜಿ, ಶಿವು ಗುಂಡಿ, ದಾನಪ್ಪ ಹುಲಜತ್ತಿ, ಶ್ರೀಶೈಲ ದಬಾಡಿ ಇತರರಿದ್ದರು. 
ಬಾಗಲಕೋಟೆ

ಕುಸ್ತಿ ಪ್ರದರ್ಶನ ಯುವ ಪೀಳಿಗೆಗೆ ಮಾದರಿ

ಶಾಸಕ ಸಿದ್ದು ಸವದಿ ಹೇಳಿಕೆ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ಐದು ಗಂಟೆಗೂ ಹೆಚ್ಚು ಕಾಲ ನಡೆದ ಪಂದ್ಯಾವಳಿ

ರಬಕವಿ/ಬನಹಟ್ಟಿ: ಜಾತ್ರಾ ಸಂದರ್ಭಗಳಲ್ಲಿ ಯುವಕರ ಕುಸ್ತಿ ಪ್ರದರ್ಶನ ಮುಂದಿನ ಯುವ ಪೀಳಿಗೆಗೆ ಮಾದರಿಯಾಗುತ್ತಿದೆ. ಈ ಪರಂಪರೆ ಹೀಗೆ ಮುಂದುವರಿಯಬೇಕು ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.

ಬನಹಟ್ಟಿ ನಗರದ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ಅಂಗವಾಗಿ ಅಶೋಕ ಕಾಲನಿಯಲ್ಲಿ ನಿರ್ಮಿಸಲಾಗಿದ್ದ ಕುಸ್ತಿ ಮೈದಾನದಲ್ಲಿ ಬುಧವಾರ ಸಂಜೆ ನಡೆದ ರಾಷ್ಟ್ರೀಯ ಮಟ್ಟದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪಿಕೆಪಿಎಸ್ ಅಧ್ಯಕ್ಷ ಭೀಮಶಿ ಮಗದುಮ್ಮ, ಕುಸ್ತಿ ಮೈದಾನದ ಉಸ್ತುವಾರಿ ಬ್ರೀಜ್‌ಮೋಹನ ಡಾಗಾ, ಚೇರ್ಮನ್ ಮಲ್ಲಿಕಾರ್ಜುನ ತುಂಗಳ ಮಾತನಾಡಿ, ಕುಸ್ತಿ ಪಂದ್ಯಗಳು ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಜೀವಂತವಾಗಿವೆ. ದೇಶಿ ಕ್ರೀಡೆಯಾದ ಕುಸ್ತಿ ಹಾಗೂ ಪೈಲ್ವಾನರನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಸುಸಜ್ಜಿತ ಗರಡಿ ಮನೆಗಳನ್ನು ನಿರ್ಮಿಸುವ ಮೂಲಕ ಯುವಕರಲ್ಲಿ ಕುಸ್ತಿ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಬೇಕು ಎಂದು ಹೇಳಿದರು.

ಪಂದ್ಯಾವಳಿಯಲ್ಲಿ ಒಟ್ಟು 51 ಜೋಡಿ ಕುಸ್ತಿಪಟುಗಳು ತಮ್ಮ ಪಟ್ಟುಗಳ ಮೂಲಕ ಶಕ್ತಿ, ಸಾಮರ್ಥ್ಯ ಹಾಗೂ ಕೌಶಲ ಪ್ರದರ್ಶಿಸಿದರು. ಮಹಿಳಾ ಕುಸ್ತಿ ಪಂದ್ಯಗಳು ವಿಶೇಷ ಆಕರ್ಷಣೆಯಾಗಿದ್ದು, ಪ್ರೇಕ್ಷಕರು ಉತ್ಸಾಹದಿಂದ ವೀಕ್ಷಿಸಿದರು. ಐದು ಗಂಟೆಗೂ ಹೆಚ್ಚು ಕಾಲ ನಡೆದ ಪಂದ್ಯಾವಳಿ ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡಿತು.

ಖ್ಯಾತ ಜ್ಯೋತಿಷಿ ಶಂಕರ ಗುರೂಜಿ, ಶಿವು ಗುಂಡಿ, ದಾನಪ್ಪ ಹುಲಜತ್ತಿ, ಶ್ರೀಶೈಲ ದಬಾಡಿ, ಸಿದ್ಧನಗೌಡ ಪಾಟೀಲ, ಪ್ರಶಾಂತ ಕೊಳಕಿ, ಶ್ರೀಶೈಲ ಬೀಳಗಿ, ಜಯವಂತ ಮಿಳ್ಳಿ, ಶಂಕರ ಜಾಲಿಗಿಡದ, ಸುರೇಶ ಪಾಟೀಲ, ದುಂಡಪ್ಪ ಕರಿಗಾರ, ಶೇಖರ ಸಂಪಗಾಂವಿ, ಪ್ರಭಾಕರ ಮೊಳೇದ, ಶ್ರೀಶೈಲ ಉಳ್ಳಾಗಡ್ಡಿ, ಮಲ್ಲಪ್ಪ ಜನವಾಡ, ರಾಜು ಶಾಸ್ತ್ರಿಗೊಳ್ಳರ, ಈಶ್ವರ ಪಾಟೀಲ, ತುಕಾರಾಮ ಕಾಂಬಳೆ ಇತರರಿದ್ದರು.

ಬನಹಟ್ಟಿ ಮಲ್ಲಿಕಾರ್ಜುನ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಕುಸ್ತಿಯಲ್ಲಿ ಸೆಣಸಾಡುತ್ತಿರುವ ಕುಸ್ತಿ ಪಟುಗಳು.