ರಬಕವಿ-ಬನಹಟ್ಟಿ: ಉತ್ತರ ಕರ್ನಾಟಕದ ಜನಜೀವನದಲ್ಲಿ ಕುಸ್ತಿಗೆ ವಿಶಿಷ್ಟ ಸ್ಥಾನವಿದೆ. ತಂತ್ರಜ್ಞಾನ ಯುಗದಲ್ಲಿಯೂ ಈ ಭಾಗದಲ್ಲಿ ಕುಸ್ತಿ ಅಭ್ಯಾಸ ಮಾಡುವವರ ಹಾಗೂ ಪಂದ್ಯಗಳನ್ನು ವೀಕ್ಷಿಸುವವರ ಸಂಖ್ಯೆ ಗಮನಾರ್ಹವಾಗಿದೆ ಎಂದು ಬನಹಟ್ಟಿಯ ಹಿರಿಯ ರಾಜೇಂದ್ರ ಭದ್ರಣ್ಣವರ ಹೇಳಿದರು.
ನಗರದ ಆರಾಧ್ಯ ದೈವ ಶ್ರೀ ಕಾಡಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಸಂಜೆ ಆಯೋಜಿಸಿದ್ದ ಜಂಗಿ ನಿಕಾಳಿ ಕುಸ್ತಿ ಪಂದ್ಯಾವಳಿಯ ಮೈದಾನಕ್ಕೆ ಶ್ರೀನಿವಾಸ ಭದ್ರಣ್ಣವರ ಅವರೊಂದಿಗೆ ಜಂಟಿಯಾಗಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಕುಸ್ತಿ ದೈಹಿಕ ಸಾಮರ್ಥ್ಯದ ಜತೆಗೆ ಶಿಸ್ತು, ಧೈರ್ಯ ಮತ್ತು ತಾಳ್ಮೆ ಬೆಳೆಸುವ ಸಾಂಪ್ರದಾಯಿಕ ಕ್ರೀಡೆಯಾಗಿದ್ದು, ಇಂತಹ ಪಂದ್ಯಾವಳಿಗಳು ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸುತ್ತವೆ ಎಂದರು.
ಜಂಗಿ ನಿಕಾಳಿ ಕುಸ್ತಿ ಪಂದ್ಯಾವಳಿಗೆ ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ನೆರೆಯ ಮಹಾರಾಷ್ಟ್ರದಿಂದಲೂ ಪೈಲ್ವಾನರು ಆಗಮಿಸಿದ್ದರು. ನೂರಕ್ಕೂ ಹೆಚ್ಚು ಪೈಲ್ವಾನರು ಅಖಾಡಕ್ಕಿಳಿದು ವಿವಿಧ ಪಟ್ಟುಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಗಮನ ಸೆಳೆದರು.
ಅಖಾಡದಲ್ಲಿ ಪೈಲ್ವಾನರು ಒಳ ಟಾಂಗ್, ಹೊರ ಟಾಂಗ್, ದಿಸೆ ಜೋಡಿ, ಚಿತ್ತ ಸೇರಿ ಸಾಂಪ್ರದಾಯಿಕ ಕುಸ್ತಿ ಪಟ್ಟುಗಳನ್ನು ಪ್ರದರ್ಶಿಸಿದರು. ರೋಚಕ ಹಣಾಹಣಿಗಳಿಗೆ ಪ್ರೇಕ್ಷಕರು ಶಿಳ್ಳೆ ಹಾಗೂ ಚಪ್ಪಾಳೆಗಳ ಮೂಲಕ ಭರ್ಜರಿ ಪ್ರೋತ್ಸಾಹ ನೀಡಿದರು. ಸುತ್ತಮುತ್ತಲಿನ ಗ್ರಾಮಗಳು ಮಾತ್ರವಲ್ಲದೆ ದೂರದ ಊರುಗಳಿಂದಲೂ ಅಪಾರ ಸಂಖ್ಯೆಯಲ್ಲಿ ಕುಸ್ತಿ ಅಭಿಮಾನಿಗಳು ಆಗಮಿಸಿದ್ದರು.
ಸಮಿತಿ ಅಧ್ಯಕ್ಷ ಚನ್ನವೀರಪ್ಪ ಹಾದಿಮನಿ, ಬ್ರಿಜ್‌ಮೋಹನ ಡಾಗಾ, ಮಲ್ಲಿಕಾರ್ಜುನ ಬಾಣಕಾರ, ಈರಪ್ಪ ಹಿಪ್ಪರಗಿ, ಶ್ರೀಶೈಲ ದಭಾಡಿ, ದಾನಪ್ಪ ಹುಲತ್ತಿ, ಭೀಮಸಿ ಮಗದುಮ್, ಶಂಕರ ಜಾಲಿಗಿಡದ, ಶೇಖರ ಸಂಪಗಾವಿ, ಶ್ರೀನಿವಾಸ ಹಳ್ಳಾಳ ಸೇರಿ ಹಲವರು ಉಪಸ್ಥಿತರಿದ್ದರು.