ಕಬ್ಬಿಗೆ ಸೂಕ್ತ ಬೆಲೆ, ರೈತ
ಜಮಖಂಡಿ : ಪ್ರತಿ ವರ್ಷ ಹೋರಾಟ ನಡೆಸಿ ಕಬ್ಬಿನ ಬಿಲ್ ತೆಗೆದುಕೊಳ್ಳುವಂತಾಗಿದೆ. ಸರ್ಕಾರ ಯೋಗ್ಯ ದರ ಘೋಷಣೆಮಾಡಿ ರೈತರಿಗೆ ಅನುಕೂಲ ಮಾಡುವವರೆಗೆ ಹೋರಾಟ ಮುಂದುವರಿಯಲಿದೆ. ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ರಸ್ತೆ ತಡೆ ಸೇರಿ ಉಗ್ರ ಹೋರಾಟ ಮಾಡಲಾಗುವುದು ಎಂದು ರೈತ ಮುಖಂಡ ರಾಜು ನದಾಫ್ ಹೇಳಿದರು.
ತಾಲೂಕು ಆಡಳಿತ ಸೌಧದ ಎದುರು ರೈತ ಸಂಘ ಬುಧವಾರ ಹಮ್ಮಿಕೊಂಡಿದ್ದ ಎರಡನೇ ದಿನದ ಅಹೋರಾತ್ರಿ ಧರಣಿಯಲ್ಲಿ ಮಾತನಾಡಿದರು. ಕಬ್ಬಿಗೆ ಸೂಕ್ತ ಬೆಲೆ ನಿಗದಿಯಾಗುವವರೆಗೆ ಹೋರಾಟ ನಡೆಯಲಿದೆ. ರಾಜಕೀಯ ಕೆಲ ಮುಖಂಡರು ರೈತರ ಮಧ್ಯ ಒಡಕು ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅದು ಸಾಧ್ಯವಾಗುವುದಿಲ್ಲ, ರೈತರು ಜಾಗೃತರಾಗಿದ್ದಾರೆ ಎಂದರು.
ರೈತರು ಹೋರಾಟಕ್ಕೆ ಬಂದಾಗ ಸರ್ಕಾರದ ಪ್ರತಿನಿಧಿಗಳು ಸಭೆ ನಡೆಸಿ ಭರವಸೆ ನೀಡುತ್ತಾರೆ. ನ್ಯಾಯಯುತ ಬೆಲೆ ಸಿಗುವಂತಹ ಸ್ಪಷ್ಟ ನಿರ್ಧಾರ ಮಾತ್ರ ಹೊರಬರುತ್ತಿಲ್ಲ. ಕಬ್ಬು ಬೆಳೆಯಲು ಬೀಜ, ಗೊಬ್ಬರ, ಔಷಧ, ನೀರು, ಕಾರ್ಮಿಕರು ಸೇರಿ ಎಲ್ಲ ವೆಚ್ಚಗಳೂ ಹೆಚ್ಚಾಗಿವೆ. ಸಾಲ ಮಾಡಿ ಬೆಳೆ ಬೆಳೆದ ರೈತರಿಗೆ ಸೂಕ್ತ ಬೆಲೆ ಸಿಗದಿದ್ದರೆ ಬದುಕು ನಡೆಸುವುದಾದರೂ ದುಸ್ತರವಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ಆಮ್ ಆದ್ಮಿ ಪಕ್ಷದ ತಾಲೂಕು ಅಧ್ಯಕ್ಷ ಶಿವಾನಂದ ಪಾರಶೆಟ್ಟಿ ಮಾತನಾಡಿ, ಸ್ವಾಮಿನಾಥನ ವರದಿ ಸರ್ಕಾರ ಜಾರಿ ಮಾಡಬೇಕು, ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡುವ ಜೊತೆಗೆ ಸರ್ಕಾರದಿಂದ ಬೆಂಬಲ ಬೆಲೆ ನೀಡಬೇಕು. ಬರ ಪರಿಹಾರಕ್ಕೆ ಎಕರೆಗೆ 10 ಸಾವಿರ ರೂ. ಕೂಡಲೇ ನೀಡಬೇಕು ಎಂದರು.
ಸದಾಶಿವ ಕವಟಗಿ, ಬಜಪ್ಪ ಕಡಕೋಳ, ಬಾಹುಬಲಿ ನ್ಯಾಮಗೌಡ, ಸಿದ್ದಪ್ಪ ಬನಜನವರ, ಸಚಿನ ಖಿದ್ರಾಪೂರ, ಶ್ರವನ ಬಾಳಪ್ಪನವರ, ಸಾಗರ ಕರಬಸಪ್ಪನವರ, ಪರಪ್ಪ ಪರಮಗೊಂಡಬಜಪ್ಪ ಕಡಕೋಳ, ಶಿವಪ್ಪ ಹೂಗಾರ, ರಾವಸಾಬ ಜಾಧವ, ಮುರೆಪ್ಪ ಬೆಳಗಲಿ ಇದ್ದರು.
ರೈತ ಸಂಘಕ್ಕೆ ಆಲಗೂರ ಗ್ರಾಮದ ರೈತರು ಅಡುಗೆ ಮಾಡಲು ಬಾಂಡೆ, ಕುಂಚನೂರ ಗ್ರಾಮದ ರೈತರು ಮೈಕ, ಸನಾಳ ಗ್ರಾಮದ ರೈತರು ಮ್ಯಾಟ್, ಅಡುಗೆ ಮಾಡಲು ಒಲೆ ಸೇರಿ ಹಲವಾರು ರೈತರು ಧನ ಸಹಾಯ ಮಾಡುತ್ತಿದ್ದಾರೆ. ಇದರಿಂದ ಇಲ್ಲಿಯೇ ಅಡುಗೆ ಸಿದ್ಧಪಡಿಸಿ ತಿಂದು ಹೋರಾಟ ಮಾಡುತ್ತಿರುವುದಾಗಿ ರೈತ ಮುಖಂಡರು ತಿಳಿಸಿದರು.