ಬಾಗಲಕೋಟೆ: ಮುಂದಿನ ದಿನಗಳಲ್ಲಿ ಆಯುರ್ವೇದ ಚಿಕಿತ್ಸೆಗೆ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಹಾಗೂ ಪ್ರಥಮ ಆದ್ಯತೆ ದೊರೆಯಲಿದ್ದು, ಆಯುರ್ವೇದ ವೈದ್ಯಕೀಯ ಪದವೀಧರರಿಗೆ ಉತ್ತಮ ಅವಕಾಶಗಳು ಲಭ್ಯವಾಗಲಿವೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ. ಕೊನರಡ್ಡಿ ಜೆ.ಬಿ. ಹೇಳಿದರು.
ನಗರದ ಬಿವಿವಿಎಸ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವತಿಯಿಂದ ಆಯೋಜಿಸಿದ್ದ ಬಿಎಎಂಎಸ್ ಪದವೀಧರರ ‘ಉತ್ಕರ್ಷ-2026’ ಪದವಿ ಪ್ರದಾನ ಮಾಡಿ ಮಾತನಾಡಿದರು.
ವೈದ್ಯಕೀಯ ಕ್ಷೇತ್ರ ಜಾಗತಿಕ ಮಟ್ಟದಲ್ಲಿ ವಿಸ್ತಾರಗೊಳ್ಳುತ್ತಿದ್ದು, ಭಾರತೀಯ ಆಯುರ್ವೇದ ಪದ್ಧತಿ ತನ್ನದೇ ಆದ ಪರಂಪರೆ ಮತ್ತು ಮಹತ್ವ ಹೊಂದಿದೆ. ಜನತೆ ಆಯುರ್ವೇದ ಚಿಕಿತ್ಸೆಯತ್ತ ಮುಖ ಮಾಡಿದ್ದು ಮುಂದಿನ ದಿನಗಳಲ್ಲಿ ಆಯುರ್ವೇದ ಚಿಕಿತ್ಸೆಗೆ ಹೆಚ್ಚಿನ ಬೇಡಿಕೆ ಬರಲಿದೆ. ಪದವೀಧರರು ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವುದರ ಜೊತೆಗೆ ತಮ್ಮ ಭವಿಷ್ಯವನ್ನೂ ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದರು.
ಬಳ್ಳಾರಿ ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪಂಚಕರ್ಮ ವಿಭಾಗದ ಪ್ರಾಧ್ಯಾಪಕ ಡಾ. ಸಂತೋಷ ಯಡಹಳ್ಳಿ ಮಾತನಾಡಿ, ವೈದ್ಯಕೀಯ ವೃತ್ತಿ ಕೇವಲ ಹಣ ಸಂಪಾದನೆಗೆ ಸೀಮಿತವಾಗದೆ ಸೇವಾ ಮನೋಭಾವದಿಂದ ಕೂಡಿರಬೇಕು. ರೋಗಿಗಳ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ, ಉತ್ತಮ ಸಂವಹನದ ಮೂಲಕ ಚಿಕಿತ್ಸೆ ನೀಡುವುದು ವೈದ್ಯರ ಪ್ರಮುಖ ಜವಾಬ್ದಾರಿಯಾಗಿದೆ, ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ನಿರಂತರವಾಗಿ ವೃದ್ಧಿಸಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯನ್ನು ವೈದ್ಯಕೀಯ ಕ್ಷೇತ್ರದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಆಯುರ್ವೇದದಲ್ಲಿ ಪ್ರತಿಯೊಬ್ಬ ರೋಗಿಯ ಪ್ರಕೃತಿ ವಿಭಿನ್ನವಾಗಿರುವುದರಿಂದ ಚಿಕಿತ್ಸೆಯೂ ವೈಯಕ್ತಿಕವಾಗಿರಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನ ರಾಜಶೇಖರಯ್ಯ ಇನ್ಸ್ಟಿಟ್ಯೂಟ್ ಆ್ ಆಯುರ್ವೇದ ಮೆಡಿಕಲ್ ಸೈನ್ಸಸ್ ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಶಂಕರಗೌಡ ಪಾಟೀಲ ಮಾತನಾಡಿ, ಪದವಿ ಪೂರ್ಣಗೊಳಿಸಿದ ಬಳಿಕವೇ ನಿಜವಾದ ಜೀವನದ ಪರೀಕ್ಷೆ ಆರಂಭವಾಗುತ್ತದೆ. ವೈದ್ಯಕೀಯ ವೃತ್ತಿಯಲ್ಲಿ ರೋಗಿಗಳೇ ನಿಜವಾದ ಪ್ರಶ್ನೆಪತ್ರಿಕೆಗಳಾಗಿದ್ದು, ತಾಳ್ಮೆ, ನಿರಂತರ ಪ್ರಯತ್ನ ಹಾಗೂ ಆತ್ಮವಿಶ್ವಾಸ ಯಶಸ್ಸಿಗೆ ಸಹಕಾರಿಯಾಗುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಿವಿವಿಎಸ್ ಆಯುರ್ವೇದ ಕಾಲೇಜಿನ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಮಾತನಾಡಿ, ಬಿವಿವಿ ಸಂಘದ ಆಯುರ್ವೇದ ಕಾಲೇಜು ಈ ಭಾಗದ ಜನರ ಚಿಕಿತ್ಸೆಗೆ ಹಾಗೂ ವಿದ್ಯಾರ್ಥಿಗಳಿಗೆ ಆಶಾದಾಯಕವಾಗಿದೆ, ಸಂಘ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಅವರ ಆಶಯದಂತೆ ಹಲವಾರು ಆಯುರ್ವೇದ ಚಿಕಿತ್ಸೆಗಳನ್ನು ಜನರಿಗೆ ನೀಡುವ ಮೂಲಕ ಸೇವೆಯಲ್ಲಿ ತೊಡಗಿದೆ, ಎಲ್ಲ ಸಾರ್ವಜನಿಕರು ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಒಟ್ಟು 64 ಬಿಎಎಂಎಸ್ ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು. ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಚಂದ್ರಶೇಖರ ಶೆಟ್ಟರ, ಸಂಗಣ್ಣ ಕಲಾದಗಿ, ಶರಣಪ್ಪಣ್ಣ ರುದ್ರಾಕ್ಷಿ, ಮಲ್ಲಿಕಾರ್ಜುನ ಮೆಳ್ಳಿಗೇರಿ, ಪ್ರಾಂಶುಪಾಲ ಡಾ. ಎಂ.ಎಸ್. ಹಿರೇಮಠ ಇತರರಿದ್ದರು.