ಬಾಗಲಕೋಟೆ: ಸಾರ್ವಜನಿಕರಿಂದ ಬಂದ ದೂರುಗಳು, ಅರ್ಜಿದಾರರು ಸಲ್ಲಿಸಿದ ಮನವಿಗಳು ಹಾಗೂ ದಿನ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ಆಧಾರದ ಮೇಲೆ ಕರ್ನಾಟಕ ಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಬಾಗಲಕೋಟೆ ಜಿಲ್ಲೆಯ ಆರು ಪಟ್ಟಣ ಪಂಚಾಯಿತಿಗಳ ಮೇಳೆ ಗುರುವಾರ ದಾಳಿ ನಡೆಸಿ ಶೋಧ ಹಾಗೂ ಪರಿಶೀಲನಾ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಲೋಕಾಯುಕ್ತರ ನಿರ್ದೇಶನದಂತೆ ಶಿರೂರ, ಲೋಕಾಪುರ, ಕೆರೂರ, ಕಮತಗಿ, ಬೀಳಗಿ ಹಾಗೂ ಬೆಳಗಲಿ ಪಟ್ಟಣ ಪಂಚಾಯಿತಿಗಳ ಕಚೇರಿಗಳಿಗೆ ಭೇಟಿ ನೀಡಿ ವಿವಿಧ ದಾಖಲೆಗಳು ಮತ್ತು ಆಡಳಿತಾತ್ಮಕ ಕಾರ್ಯವೈಖರಿ ಪರಿಶೀಲಿಸಲಾಗುತ್ತಿದೆ.
ಇ-ಸ್ವತ್ತು, ಎನ್ಒಸಿ ಹಾಗೂ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಡುವುದು, ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಮಾಡುವುದು ಸೇರಿ ಹಲವು ಅಕ್ರಮಗಳ ಕುರಿತು ದೂರುಗಳು ಬಂದಿದ್ದವು. ನಿಯಮ ಉಲ್ಲಂಸಿ ನಿವೇಶನಗಳನ್ನು ಸೃಷ್ಟಿಸಿ ವಾಣಿಜ್ಯ ಉದ್ದೇಶಕ್ಕಾಗಿ ಡಿಜಿಟಲ್ ಉತಾರೆ ಹಾಗೂ ನಕಲಿ ಹಕ್ಕುಪತ್ರಗಳನ್ನು ನೀಡಿರುವುದು, ಲೇಔಟ್ ಅಭಿವೃದ್ಧಿಪಡಿಸದಿದ್ದರೂ ನಿಯಮ ಬಾಹಿರವಾಗಿ ದಾಖಲೆ ಮಾಡಿರುವ ಆರೋಪಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ.
ಅಲ್ಲದೆ ಪಟ್ಟಣಗಳಲ್ಲಿನ ಶುದ್ಧ ಕುಡಿಯುವ ನೀರಿನ ನಿರ್ವಹಣೆ, ತೆರಿಗೆ ಸಂಗ್ರಹಣೆ ಹಾಗೂ ಸಾರ್ವಜನಿಕರಿಗೆ ಸೇವೆ ಒದಗಿಸುವಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯವರ ಕರ್ತವ್ಯಲೋಪದ ಆರೋಪಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ ಹಾಗೂ ವಿಜಯಪುರ ಜಿಲ್ಲೆಗಳ ಲೋಕಾಯುಕ್ತ ಘಟಕಗಳ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
ಇಬ್ಬರು ಡಿವೈಎಸ್ಪಿ, 9 ಜನ ಪೊಲೀಸ್ ನಿರೀಕ್ಷಕರು ಹಾಗೂ 30 ಸಿಬ್ಬಂದಿ ಸೇರಿ ಒಟ್ಟು 41 ಅಧಿಕಾರಿಗಳು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ದಾಖಲೆ ಪರಿಶೀಲನೆ ಮುಂದು ವರೆದಿದೆ.
ಲೋಕಾಪುರ: ಸಾರ್ವಜನಿಕರಿಂದ ಬಂದ ದೂರುಗಳು ಹಾಗೂ ಅರ್ಜಿದಾರರು ಸಲ್ಲಿಸಿದ ಮನವಿಗಳ ಆಧಾರದ ಮೇಲೆ ಕರ್ನಾಟಕ ಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಗುರುವಾರ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಶೋಧ ಹಾಗೂ ಪರಿಶೀಲನಾ ಕಾರ್ಯಾಚರಣೆ ನಡೆಸಿದರು.
ಬಾಗಲಕೋಟೆ ಲೋಕಾಯುಕ್ತರ ನಿರ್ದೇಶನದ ಮೇರೆಗೆ ಬೆಳಗಾವಿ ಲೋಕಾಯುಕ್ತರ ತಂಡ ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿ, ಕಚೇರಿಯ ಆಡಳಿತಾತ್ಮಕ ಕಾರ್ಯವೈಖರಿ ಹಾಗೂ ವಿವಿಧ ದಾಖಲೆಗಳನ್ನು ಪರಿಶೀಲಿಸಿತು.
ಇ-ಸ್ವತ್ತು, ನಿರಾಕ್ಷೇಪಣಾ ಪ್ರಮಾಣಪತ್ರ (ಎನ್ಒಸಿ) ಮತ್ತು ಕಟ್ಟಡ ನಿರ್ಮಾಣದ ಅನುಮತಿ ನೀಡುವ ಪ್ರಕ್ರಿಯೆಯಲ್ಲಿ ಅರ್ಜಿಗಳ ವಿಲೇವಾರಿಗೆ ವಿಳಂಬ ಮಾಡುತ್ತಿರುವುದು ಸೇರಿ ಹಲವು ಅಕ್ರಮಗಳ ಕುರಿತು ಬಂದಿರುವ ದೂರುಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದರು.
ಇದಲ್ಲದೆ, ಸಿಬ್ಬಂದಿಯ ಬಯೋಮೆಟ್ರಿಕ್ ಹಾಜರಾತಿ, ಸಾರ್ವಜನಿಕರಿಗೆ ಒದಗಿಸುವ ಸೇವೆಗಳ ಗುಣಮಟ್ಟ, ತೆರಿಗೆ ಸಂಗ್ರಹಣೆ ಹಾಗೂ ಶುದ್ಧ ಕುಡಿಯುವ ನೀರಿನ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು. ಕಚೇರಿಯಲ್ಲಿ ಹಾಜರಿದ್ದ ಸಿಬ್ಬಂದಿಯ ಮೊಬೈಲ್ಗಳಲ್ಲಿನ ೆನ್ಪೇ ವಹಿವಾಟುಗಳನ್ನೂ ಪರಿಶೀಲಿಸಿ, ಹಣಕಾಸಿನ ವ್ಯವಹಾರಗಳ ಕುರಿತು ಮಾಹಿತಿ ಪಡೆದರು.
ಪಟ್ಟಣದ 9ನೇ ವಾರ್ಡ್ನ ಭೋವಿ ಗಲ್ಲಿಯ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆ ಕುರಿತು ಲೋಕಾಯುಕ್ತರಿಗೆ ದೂರು ಸಲ್ಲಿಸಿದರು. ವಾರ್ಡ್ನಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಈ ಕುರಿತು ಇಂಜಿನಿಯರ್ ಹಾಗೂ ಮುಖ್ಯಾಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಿದ ನಿವಾಸಿಗಳು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.