ಬನಹಟ್ಟಿ ಕಾಡಸಿದ್ಧೇಶ್ವರ ಜಾತ್ರೆ ನಿಮಿತ್ತ ಸೋಮವಾರದಿಂದ ಗುರುವಾರದವರೆಗೆ ನಡೆಯುವ ಅನ್ನದಾಸೋಹ ಸೇವೆಗೆ ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯ ಚಾಲನೆ ನೀಡಿದರು. ಸಿದ್ಧನಗೌಡ ಪಾಟೀಲ, ಶ್ರೀಶೈಲ ಧಬಾಡಿ, ನಿಜಗುಣಯ್ಯ ಕಾಡದೇವರ, ಕಾಡಪ್ಪ ಬಾಬಾನಗರ ಇತರರಿದ್ದರು. 
ಬಾಗಲಕೋಟೆ

ಅನ್ನ ದಾಸೋಹ ಸೇವೆ ಶ್ರೇಷ್ಠ ಕಾರ್ಯ

ಶರಣಬಸವ ಶಿವಾಚಾರ್ಯ ಅಭಿಮತ ಕಾಡಸಿದ್ಧೇಶ್ವರ ಜಾತ್ರೆ ಪ್ರಸಾದ ಸೇವೆಗೆ ಚಾಲನೆ

ರಬಕವಿ/ಬನಹಟ್ಟಿ: ಜಾತ್ರೆಯಲ್ಲಿ ಭಕ್ತರಿಗೆ ಅನ್ನ ದಾಸೋಹ ವಿತರಿಸುವ ಸೇವೆ ಅತ್ಯಂತ ಶ್ರೇಷ್ಠ. ದೂರದ ಊರುಗಳಿಂದ ಆಗಮಿಸುವ ಭಕ್ತರಿಗೆ ಪ್ರಸಾದ ನೀಡುವುದರಿಂದ ಅನುಕೂಲವಾಗಲಿದೆ ಎಂದು ಸ್ಥಳೀಯ ಹಿರೇಮಠದ ಶರಣಬಸವ ಶಿವಾಚಾರ್ಯರು ಹೇಳಿದರು.

ನಗರದ ಕಾಡಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ಕಾಡಸಿದ್ಧೇಶ್ವರ ಜಾತ್ರೆ ಅಂಗವಾಗಿ ನಾಲ್ಕು ದಿನಗಳ ಕಾಲ ನಡೆಯಲಿರುವ ಪ್ರಸಾದ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸಾದ ಸೇವೆ ಹಾಗೂ ಇತರ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡ ಪ್ರತಿಯೊಬ್ಬರ ಸೇವೆ ಶ್ಲಾಘನೀಯ. ಭಕ್ತರಿಗೆ ಅನ್ನ ಪ್ರಸಾದ ನೀಡುವ ಮೂಲಕ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಪ್ರಸಾದ ಸೇವಾ ಸಮಿತಿ ಮುಖಂಡ ಪಿಂಟು ಚಿಂಡಕ ಮಾತನಾಡಿ, ನಾಲ್ಕು ದಿನಗಳ ಕಾಲ ಮಧ್ಯಾಹ್ನ ಹಾಗೂ ಸಂಜೆ ಪ್ರಸಾದ ಸೇವೆ ನಡೆಯಲಿದೆ. ರಬಕವಿ/ಬನಹಟ್ಟಿ ಹಾಗೂ ಸುತ್ತಮುತ್ತಲಿನ ಮಹಿಳೆಯರು ಅಪಾರ ಸಂಖ್ಯೆಯಲ್ಲಿ ರೊಟ್ಟಿಗಳನ್ನು ನೀಡಿದ್ದು, ಪ್ರತಿದಿನ ಅಂದಾಜು 25 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಐದು ಕ್ವಿಂಟಲ್ ಹಾಲುಹುಗ್ಗಿ ಹಾಗೂ ಎಂಟು ಕ್ವಿಂಟಲ್‌ಗೂ ಅಧಿಕ ಕಿಚಡಿ ಪ್ರಸಾದ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.

ಮುಖಂಡರಾದ ಸಿದ್ಧನಗೌಡ ಪಾಟೀಲ, ಶ್ರೀಶೈಲ ಅಥಣಿ, ಶ್ರೀಶೈಲ ಧಬಾಡಿ, ನಿಜಗುಣಯ್ಯ ಕಾಡದೇವರ, ಕಾಡಪ್ಪ ಬಾಬಾನಗರ, ಗಿರೀಶ ಕಾಡದೇವರ, ಬಸವರಾಜ ಮುಗತಿ, ಅಂದಾನಯ್ಯ ಕಾಡದೇವರ, ಡಾ. ಪ್ರಭು ಪಾಟೀಲ, ಬಾಳೇಶ ಗಣೇಶನವರ, ಶ್ರೀಶೈಲ ಮಠಪತಿ, ಮಲ್ಲಿಕಾರ್ಜುನ ತುಂಗಳ, ಕಿರಣ ಆಳಗಿ, ಪ್ರಶಾಂತ ಕೊಳಕಿ ಇತರರಿದ್ದರು.