ಬಾಗಲಕೋಟೆ ಬಿವಿವಿ ಸಂಘದ ವಿವಿಧ ಮಹಾವಿದ್ಯಾಲಯಗಳ ಆಶ್ರಯ ಹಾಗೂ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಶನಿವಾರ ಬಸವೇಶ್ವರ ಮೈದಾನದಲ್ಲಿ ಶನಿವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು, ಸಂಘದ ಸದಸ್ಯರು ಮತ್ತು ಸಾರ್ವಜನಿಕರು.
- ವೀರಣ್ಣ ಚರಂತಿಮಠ ಹೇಳಿಕೆ
- ವಿಜಯವಾಣಿ ಮಾಧ್ಯಮ ಸಹಯೋಗ
- ಹತ್ತು ಸಾವಿರ ಜನರು ಭಾಗಿ
ಬಾಗಲಕೋಟೆ: ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ ಅದು ನಮ್ಮ ದೇಹ, ಮನಸ್ಸು ಮತ್ತು ಆತ್ಮದ ನಡುವೆ ಸಮತೋಲನ ಸಾಧಿಸುವ ಜೀವನ ವಿಧಾನವಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿವಿವಿ ಸಂಘದ ಮೈದಾನದಲ್ಲಿ ವಿವಿಧ ಮಹಾವಿದ್ಯಾಲಯಗಳ ಆಶ್ರಯ ಹಾಗೂ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಭಾನುವಾರ ನಡೆದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿನ ವೇಗದ ಜೀವನದಲ್ಲಿ ಯೋಗವು ಒತ್ತಡವನ್ನು ಕಡಿಮೆ ಮಾಡಿ, ಆರೋಗ್ಯಕರ ಹಾಗೂ ಸಂತೋಷದ ಬದುಕಿಗೆ ದಾರಿ ತೋರಿಸುತ್ತದೆ. ಆರೋಗ್ಯಕರ ವಯೋವೃದ್ಧಿಗಾಗಿ ಯೋಗ ಈ ವಷದ ಧ್ಯೇಯ ವಾಕ್ಯವಾಗಿದೆ. ಅದರಂತೆ ನಾವು ಪ್ರತಿದಿನ ಕೆಲವೇ ನಿಮಿಷಗಳಾದರೂ ಯೋಗಕ್ಕೆ ಮೀಸಲಿಟ್ಟರೆ, ನಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸಬಹುದು ಎಂದರು.
ಯೋಗದ ಸಂದೇಶವಾದ ಆರೋಗ್ಯ, ಶಾಂತಿ ಮತ್ತು ಸಾಮರಸ್ಯವನ್ನು ಎಲ್ಲೆಡೆ ಹರಡಬೇಕು. ಯೋಗವು ಭಾರತದ ಪ್ರಾಚೀನ ಪರಂಪರೆಯ ಅಮೂಲ್ಯ ಕೊಡುಗೆಯಾಗಿದೆ. ನಿಯಮಿತ ಯೋಗಾಭ್ಯಾಸದಿಂದ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ, ಮನಸ್ಸು ಶಾಂತವಾಗುತ್ತದೆ ಮತ್ತು ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಮಕ್ಕಳಿಂದ ವಯೋವೃದ್ಧರ ತನಕ ಎಲ್ಲರೂ ಯೋಗದ ಪ್ರಯೋಜನವನ್ನು ಪಡೆಯಿರಿ ಎಂದು ತಿಳಿಸಿದರು.
ಗಮನ ಸೆಳೆದ ಆಸನಗಳು
ದೇಹದ ಸಮತೋಲನ ಮತ್ತು ಭಂಗಿಯನ್ನು ಸುಧಾರಿಸುವ ತಾಡಾಸನ, ಏಕಾಗ್ರತೆ ಮತ್ತು ಸಮತೋಲನ ಹೆಚ್ಚಿಸುವ ವೃಕ್ಷಾಸನ,ದೇಹದ ನಮ್ಯತೆಯನ್ನು ಹೆಚ್ಚಿಸುವ ತ್ರಿಕೋನಾಸನ, ಧ್ಯಾನ ಮತ್ತು ಮನಸ್ಸಿನ ಶಾಂತಿಗೆ ಸಹಕಾರಿಯ ಪದ್ಮಾಸನ, ಜೀರ್ಣಕ್ರಿಯೆಗೆ ಸಹಕಾರಿಯಾಗುವ ವಜ್ರಾಸನ ಸೇರಿ ಸೇತು ಭಂದಾಸನ ಸುಖಾಸನ, ಭುಜಂಗಾಸನ, ಶಲಭಾಸನ, ಧನುರಾಸನ, ಪವನಮುಕ್ತಾಸನ, ಸರ್ವಾಂಗಾಸನ, ಹಲಾಸನ, ಶವಾಸನ, ಮಕರಾಸನದ ಭಂಗಿಗಳು ಗಮನ ಸೆಳೆದವು.
ಮೂರು ಕಡೆಗೆ ಏಕಕಾಲಕ್ಕೆ ಯೋಗ
ಬಿವಿವಿ ಸಂಘದ ವಿವಿಧ ಮಹಾವಿದ್ಯಾಲಯಗಳ ವತಿಯಿಂದ ಭಾನುವಾರ ನಡೆದ ಯೋಗ ದಿನಾಚರಣೆ ನಗರದ ಮೂರು ಪ್ರದೇಶಗಳಲ್ಲಿ ನಡೆಸಲಾಯಿತು. ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ನೇತೃತ್ವದಲ್ಲಿ ಬಾಗಲಕೋಟೆ ಬಸವೇಶ್ವರ ಮೈದಾನದಲ್ಲಿ ಹಾಗೂ ಎಸ್.ಎನ್. ಮೆಡಿಕಲ್ ಕಾಲೇಜು ಮೈದಾನದಲ್ಲಿ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಮತ್ತು ವಿದ್ಯಾಗಿರಿಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ನೇತೃತ್ವದಲ್ಲಿ ನಡೆಯಿತು. ಮೂರು ಕಡೆಗೆ ಸಂಘದ ವಿವಿಧ ಶಾಲೆ, ಕಾಲೇಜುಗಳು ವಿದ್ಯಾರ್ಥಿಗಳು, ಸಿಬ್ಬಂದಿ, ಸಾರ್ವಜನಿಕರು, ಸಂಘದ ಸದಸ್ಯರು ಒಳಗೊಂಡು ಅಂದಾಜು 10 ಸಾವಿರದಷ್ಟು ಜನರು ಯೋಗದಲ್ಲಿ ಪಾಲ್ಗೊಂಡಿದ್ದರು.
"
ಬಿವಿವಿ ಸಂಘದ ವಿವಿಧ ಮಹಾವಿದ್ಯಾಲಯಗಳಿಂದ ಮೂರು ಕಡೆಗೆ ಕಾರ್ಯಕ್ರಮ ಆಯೋಜಿಸಿದ್ದು, ಅಂದಾಜು 10 ಸಾವಿರಕ್ಕೂ ಅಧಿಕ ಜನರು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಯೋಗ ನಮ್ಮ ದೇಶದ ಅವಿಭಾಜ್ಯ ಅಂಗವಾಗಿದೆ. ಇವತ್ತು ಜಗತ್ತು ಸಹ ಯೋಗದ ಕಡೆಗೆ ಗಮನ ಹರಿಸಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆಗೆ ಅತ್ಯಂತ ಸಹಕಾರಿಯಾಗಿದೆ.
— | ವೀರಣ್ಣ ಚರಂತಿಮಠ ಕಾರ್ಯಾಧ್ಯಕ್ಷರು, ಬಿವಿವಿ ಸಂಘ, ಬಾಗಲಕೋಟೆ.
"
ಭಾರತದಲ್ಲಿ ಯೋಗಕ್ಕೆ ಸುದೀರ್ಘ ವರ್ಷಗಳ ಇತಿಹಾಸ ಇದೆ. ಈಗ ಯೋಗವೂ ಭಾರತ ಮಾತ್ರವಲ್ಲದೇ ವಿಶ್ವದ ವಿವಿಧ ದೇಶಗಳಲ್ಲಿ ಬಳಕೆಯಲ್ಲಿದೆ. ಯೋಗ ವಿಶ್ವಕ್ಕೆ ಭಾರತ ಕೊಟ್ಟ ಕೊಡುಗೆಯಾಗಿದೆ. ಯೋಗದಿಂದ ಆರೋಗ್ಯ ವೃದ್ಧಿಸುತ್ತದೆ. ಹಾಗೂ ಮನಸ್ಸಿನ ಮೇಲೆ ಸಂಯಮ ಸಾಧಿಸಲು ನೆರವಾಗುತ್ತದೆ.
— -ಅಶೋಕ ಸಜ್ಜನ, ಕಾರ್ಯಾಧ್ಯಕ್ಷರು, ಬಿವಿವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ.