ಜಮಖಂಡಿ ನಗರದ ಹೊರ ವಲಯದ ಮೈಗೂರ ರಸ್ತೆಯಲ್ಲಿರುವ ಪಂಚಮಸಾಲಿ ಸಮಾಜದ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ನೌಕರರ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕ ಆಶ್ರಯದಲ್ಲಿ ಆಯೋಜಿಸಿದ ತಾಲೂಕು ಪಂಚಮಸಾಲಿ ನೌಕರರ ಸಮಾವೇಶ ಹಾಗೂ ಸಾಧಕ ನೌಕರರ ಸನ್ಮಾನ ಸಮಾರಂಭ ಕಾರ್ಯಕ್ರಮ ಮಾಜಿ ಸಚಿವ ಮುರುಗೇಶ ನಿರಾಣಿ ಉದ್ಘಾಟಿಸಿದರು. ಕಮರಿಮಠದ ಶ್ರೀ ಸಿದ್ಧಲಿಂಗದೇವರು, ಆಲಗೂರ ಧರಿದೇವರ ಮಠದ ಲಕ್ಷ್ಮಣಮುತ್ಯಾ, ಪಂಚಮಸಾಲಿ ಸಮಾಜದ ಅಧ್ಯಕ್ಷ ಸೋಮನಗೌಡ ಪಾಟೀಲ ಇತರರಿದ್ದರು.
- ಮಾಜಿ ಸಚಿವ ಮುರುಗೇಶ ನಿರಾಣಿ ಅಭಿಮತ
- ಪಂಚಮಸಾಲಿ ನೌಕರರ ಸಮಾವೇಶ
- ಸಾಧಕರ ಸನ್ಮಾನ
ಜಮಖಂಡಿ: ರಾಜ್ಯದಲ್ಲಿ 80 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಪಂಚಮಸಾಲಿ ಸಮಾಜದ ಸಂಘಟನೆ ಉದ್ದೇಶದಿಂದ ಮೂರು ಪೀಠಗಳನ್ನಾಗಿ ಸ್ಥಾಪಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕು ಎಂಬ ಉದ್ದೇಶ ಹೊಂದಲಾಗಿದೆ. ಈಗ ಯಾವುದೇ ಪೀಠದಲ್ಲಿ ಭಿನ್ನಾಭಿಪ್ರಾಯವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ನಗರದ ಹೊರವಲಯದ ಮೈಗೂರ ರಸ್ತೆಯಲ್ಲಿರುವ ಪಂಚಮಸಾಲಿ ಸಮಾಜದ ಸಮುದಾಯ ಭವನದಲ್ಲಿ ಸೋಮವಾರ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ನೌಕರರ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಪಂಚಮಸಾಲಿ ನೌಕರರ ಸಮಾವೇಶ ಹಾಗೂ ಸಾಧಕ ನೌಕರರ ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೂರು ಪೀಠದ ಸ್ವಾಮೀಜಿಗಳನ್ನು ಒಂದೇ ವೇದಿಕೆಯಲ್ಲಿ ಆಮಂತ್ರಿಸುವಂತಾಗಬೇಕು. ಪೀಠ ಸ್ಥಾಪನೆ ಉದ್ದೇಶ ಸಮಾಜದ ಸಂಘಟನೆಯ ಬಲವರ್ಧನೆಗೆ ಮಾತ್ರ ಸೀಮಿತ ಮತ್ತು 2ಎ ಮೀಸಲಾತಿ ಪಡೆಯುವ ಉದ್ದೇಶವಾಗಿದೆ ಎಂದರು.
ಪಂಚಮಸಾಲಿ ಸಮಾಜ ತಲೆಬಾಗುವ ಜಾಯಮಾನವಲ್ಲ. ಯಾವಾಗಲೂ ದಾನದ ಕೈ ನಮ್ಮದಾಗಿದೆ. ಉನ್ನತ ಹುದ್ದೆಯಲ್ಲಿರದಿದ್ದರೂ 80 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದ್ದೇವೆ. ಈ ಸಂಘಟನೆ ಅನ್ಯಾಯಕ್ಕೊಳಗಾದವರಿಗೆ ನೆರವಾಗಬೇಕು ಎಂದು ತಿಳಿಸಿದರು.
ವಿ.ಪ. ಸದಸ್ಯ ಹನಮಂತ ನಿರಾಣಿ ಮಾತನಾಡಿ, ಸಮಾಜದ ಸಂಘಟನೆ ಜತೆ ನೌಕರರು ಸಂಘಟಿತರಾಗಿ ಸಮಾಜವನ್ನು ಬಲವರ್ಧನೆಗೊಳಿಸಬೇಕು. ಈ ಸಂಘಟನೆಯಿಂದ ಸಮಸ್ಯೆ ಕಷ್ಟ-ಸುಖ ಪರಸ್ಪರ ಹಂಚಿಕೊಳ್ಳುವುದರ ಜೊತೆಗೆ ಪರಿಹರಿಸುವ ಕಾರ್ಯ ಕೈ ಗೊಳ್ಳಬೇಕು ಎಂದರು.
ಪಂಚಮಸಾಲಿ ಸಮಾಜದ ಅಧ್ಯಕ್ಷ ಸೋಮನಗೌಡ ಪಾಟೀಲ ಮಾತನಾಡಿ, 12 ಜಿಲ್ಲೆಗಳಲ್ಲಿ ಪಂಚಮಸಾಲಿ ನೌಕರರ ಸಂಘ ಸ್ಥಾಪನೆ ಮಾಡಲಾಗಿದೆ. 6 ಸಾವಿರ ಜನ ಅಜೀವ ಸದಸ್ಯತ್ವ ಪಡೆದುಕೊಂಡಿದ್ದಾರೆ. ನೌಕರರಿಗಾಗಿ ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಜಮಖಂಡಿಯಲ್ಲಿ ಶಾಖೆ ಪ್ರಾರಂಭಿಸುವ ಯೋಜನೆ ಹೊಂದಲಾಗಿದೆ ಎಂದು ತಿಳಿಸಿದರು.
ಕುಂಚನೂರ ಕಮರಿಮಠದ ಶ್ರೀ ಸಿದ್ಧಲಿಂಗದೇವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಆಲಗೂರ ಧರಿದೇವರ ಮಠದ ಲಕ್ಷ್ಮಣಮುತ್ಯಾ, ಸಮಾಜದ ಮುಖಂಡ ಬಿ.ಎಸ್. ಸಿಂಧೂರ, ನೌಕರರ ಸಂಘದ ಅಧ್ಯಕ್ಷ ರವಿ ಉಚ್ಚಂಗಿ, ಚನ್ನಮ್ಮನ ಕಿತ್ತೂರ ಬಾಲಕಿಯರ ಪ್ರೌಢ ಶಾಲೆ ಉಪಪ್ರಾಂಶುಪಾಲ ಮಹೇಶ ಚನ್ನಂಗಿ, ಸಂಘದ ಅಧ್ಯಕ್ಷ ಮಹಾಂತೇಶ ನರಸನಗೌಡ್ರ, ಪಿ.ಎನ್. ಪಾಟೀಲ, ಸಂಗಮೇಶ ನಿರಾಣಿ, ಉಮೇಶ ಮಹಾಬಳಶೆಟ್ಟಿ, ಪ್ರಕಾಶ ಪಾಟೀಲ ಇತರರಿದ್ದರು. ಎಸ್.ಆರ್. ಪಾಟೀಲ ಸ್ವಾಗತಿಸಿದರು. ರಮೇಶ ಅವಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಗಿರೀಶ ಮನಗೂಳಿ ನಿರೂಪಿಸಿದರು.