ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಶನಿವಾರ ಮುಳುಗಡೆ ಸಂತ್ರಸ್ತರಿಗೆ ಹಕ್ಕು ಪತ್ರವನ್ನು ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಶಾಸಕ ಉಮೇಶ ಮೇಟಿ ಅವರು ವಿತರಿಸಿದರು.
- ಬಿಟಿಡಿಎ ಅಧ್ಯಕ್ಷ ತಪಶೆಟ್ಟಿ ಅಭಿಪ್ರಾಯ
- ಹಕ್ಕುಪತ್ರ, ಇ-ಖಾತಾ ಉತಾರ ವಿತರಣೆ
- ಕಚೇರಿಗೆ ಅಲೆದಾಡಿಸುವುದನ್ನು ತಪ್ಪಿಸಿ
ಬಾಗಲಕೋಟೆ: ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರವೂ ಮುಳುಗಡೆ ಸಂತ್ರಸ್ತರ ಧ್ವನಿಯಾಗಿ ಸಾಕಷ್ಟು ಕೆಲಸ ಕಾರ್ಯಗಳನ್ನು ಇನ್ನೂ ಮಾಡಬೇಕಿದೆ. ಸದ್ಯ ಬಿಟಿಡಿಎನಲ್ಲಿ ಇನ್ನೂ ಸಾಕಷ್ಟು ಕೆಲಸಗಳು ಉಳಿದಿವೆ ಎಂದು ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.
ಬಿಟಿಡಿಎ ಕಚೇರಿ ಆವರಣದಲ್ಲಿ ಶನಿವಾರ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಮತ್ತು ಇ-ಖಾತಾ ಉತಾರಗಳನ್ನು ವಿತರಿಸಿ ಅವರು ಮಾತನಾಡಿದರು.
ಬಿಟಿಡಿಎನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿ ಪ್ರತಿ ದಿನದ ಕೆಲಸ ಕಾರ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಕಚೇರಿಗೆ ಆಗಮಿಸಿದ ಪ್ರತಿಯೊಬ್ಬ ಸಂತ್ರಸ್ತರ ದೂರುಗಳಿಗೆ ಸ್ಪಂದಿಸುವ ಮೂಲಕ ತ್ವರಿತಗತಿಯಲ್ಲಿ ಬಗೆಹರಿಸುವ ಕೆಲಸವಾಗಬೇಕು. ಪ್ರಾಧಿಕಾರದ ಸಭೆಯಲ್ಲಿ ಆಗಬೇಕಾದ ಕೆಲಸ, ಯೋಜನೆ ಯಾವ ರೀತಿ ಹಾಕಿಕೊಳ್ಳಬೇಕು ಹಾಗೂ ಇರುವಂತಹ ಕೆಲಸಗಳನ್ನು ಪೂರ್ಣಗೊಳಿಸುವ ಕುರಿತು ಕ್ರಮ ವಹಿಸಲಾಗುತ್ತಿದೆ.
ಯುನಿಟ್-1 ಮತ್ತು 2ರಲ್ಲಿ ಸ್ವಚ್ಛತೆ ಕಾರ್ಯವನ್ನು ಕೈಗೊಳ್ಳಲಾಗಿದೆ. ಪರಿಸರ ದಿನಾಚರಣೆಯಂದು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ್ದು, ಇನ್ನೂ 10 ದಿನಗಳ ವರೆಗೆ ಅಭಿಯಾನ ಮುಂದುವರಿಯಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಾಗಲಕೋಟೆ ಶಾಸಕ ಉಮೇಶ ಮೇಟಿ ಮಾತನಾಡಿ, ಸಂತ್ರಸ್ತರ ನೋವಿಗೆ ಸ್ಪಂದಿಸುವ ಕೆಲಸವಾಗಬೇಕು. ಸಂತ್ರಸ್ತರು ಕಚೇರಿ ಬಂದಾಗ ಅವರೊಂದಿಗೆ ಸಹಾನುಭೂತಿಯಿಂದ ವರ್ತಿಸಿ ಕೆಲಸಗಳನ್ನು ಮಾಡಿಕೊಡಬೇಕು. ಈ ಟೇಬಲ್‌ನಿಂದ ಟೇಬಲ್‌ಗೆ ಅಲೆದಾಡಿಸುವಂತಾಗಬಾರದು. ಸಣ್ಣ ಕೆಲಸ ಇರಲಿ ದೊಡ್ಡ ಕೆಲಸವಿರಲಿ ಮೊದಲು ಅಲೆದಾಟ ತಪ್ಪಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವಾಗಲಿ ಎಂದು ತಿಳಿಸಿದರು.
ಈ ವೇಳೆ 15 ಸಂತ್ರಸ್ತರಿಗೆ ಹಕ್ಕುಪತ್ರ ಹಾಗೂ 46 ಜನರಿಗೆ ಇ-ಖಾತಾ ಉತಾರ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬುಡಾದ ಅಧ್ಯಕ್ಷ ಅಬ್ದುಲ್ ರಜಾಜ ಬೇನೂರ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅನೀಲ ದಡ್ಡಿ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಅಭಿಯಂತರ ಚಂದ್ರಹಾಸ ಬಂಡಿ, ಪುನರ್ವಸತಿ ಅಽಕಾರಿ ಪ್ರಶಾಂತ ಬಾರಿಗಿಡದ ಸೇರಿ ಇತರರು ಉಪಸ್ಥಿತರಿದ್ದರು.
ನೂತನ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮ
ಬಾಗಲಕೋಟೆ ನಗರದ ವ್ಯಾಪಾರಸ್ಥರ ಬಹುದಿನಗಳ ಬೇಡಿಕೆಯಾದ ನವನಗರದ ವ್ಯಾಪ್ತಿಯಲ್ಲಿ ನೂತನ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರು ಶಾಸಕ ಉಮೇಶ ಮೇಟಿ ಅವರಿಗೆ ಮನವಿ ಮಾಡಿದರು.
ಈಗಾಗಲೇ ನವನಗರದ ವ್ಯಾಪ್ತಿಯ 200 ಎಕರೆ ಜಾಗೆಯಲ್ಲಿ ಸುಸಜ್ಜಿತವಾದ ನೂತನ ಮಾರುಕಟ್ಟೆ ನಿರ್ಮಾಣ ಕುರಿತಂತೆ ಮುಖ್ಯಮಂತ್ರಿ ಹಾಗೂ ಸಚಿವರ ಗಮನಕ್ಕೆ ತರಲಾಗಿದೆ. ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುವುದೆಂದು ಶಾಸಕ ಮೇಟಿ ಭರವಸೆ ನೀಡಿದರು.