ಜಮಖಂಡಿ ತಾಲೂಕು ಆಡಳಿತ ಸೌಧ ಎದುರು ಕಲಬೀಳಗಿ ಗ್ರಾಮಸ್ಥರು ಪರಿಶಿಷ್ಟ ಜಾತಿಯವರಿಗೆ ಸ್ಮಶಾನ ಜಾಗ ಕಲ್ಪಿಸುವಂತೆ ಒತ್ತಾಯಿಸಿ ಎಸಿ ಶ್ವೇತಾ ಬೀಡಿಕರ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಶಂಕರ ಪೂಜಾರಿ, ಪಾಂಡು ಕಾಂಬಳೆ, ಸುಖದೇವ ಕಾಂಬಳೆ, ಯಮನಪ್ಪ ಪೂಜಾರಿ, ವಿಠ್ಠಲ ಪೂಜಾರಿ, ದುಂಡಪ್ಪ ಬೆಳ್ಳೆನ್ನವರ, ರಾಜು ಪೋತೆ, ಪ್ರಕಾಶ ಬೆಳ್ಳೆನ್ನವರ, ಯಲ್ಲವ್ವ ಕಾಂಬಳೆ, ರೇಷ್ಮಾ ಕವಟಗಿ, ನಿಂಬೆವ್ವ ಕಾಂಬಳೆ ಇದ್ದರು. 
ಬಾಗಲಕೋಟೆ

ಸ್ಮಶಾನಕ್ಕಾಗಿ ಕಣ್ಣೀರಿಟ್ಟ ಮಹಿಳೆಯರು

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಕಲಬೀಳಗಿ ಗ್ರಾಮಸ್ಥರಿಂದ ಎಸಿ, ತಹಸೀಲ್ದಾರರಿಗೆ ಮನವಿ
  • ಜಾಗ ನೀಡಿ, ಇಲ್ಲವೇ ಹಳೆ ಸ್ಮಶಾನಕ್ಕೆ ದಾರಿ ಕಲ್ಪಿಸಿ
  • ಸ್ಮಶಾನಕ್ಕೆ ತೆರಳುವ ದಾರಿಯನ್ನು ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿ ಬಾರಿ ಪೊಲೀಸ್ ಠಾಣೆಗೆ ದೂರು ನೀಡಬೇಕಾಗುತ್ತದೆ.
ಜಮಖಂಡಿ: ಪರಿಶಿಷ್ಟ ಜಾತಿಯವರು ಮೃತಪಟ್ಟಾಗ ಶವಸಂಸ್ಕಾರ ನಡೆಸಲು ಎದುರಾಗುತ್ತಿರುವ ಸಮಸ್ಯೆ ನಿವಾರಿಸಿ, ಪ್ರತ್ಯೇಕ ಸ್ಮಶಾನಕ್ಕೆ ಜಾಗ ಕಲ್ಪಿಸಬೇಕು ಅಥವಾ ಹಳೆ ಸ್ಮಶಾನಕ್ಕೆ ತೆರಳಲು ದಾರಿ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿ ತಾಲೂಕಿನ ಕಲಬೀಳಗಿ ಗ್ರಾಮಸ್ಥರು ನಗರದ ತಾಲೂಕು ಆಡಳಿತ ಸೌಧ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಮೆರವಣಿಗೆ ಮೂಲಕ ಆಡಳಿತ ಸೌಧಕ್ಕೆ ಆಗಮಿಸಿದ ಗ್ರಾಮಸ್ಥರು ಎಸಿ ಶ್ವೇತಾ ಬೀಡಿಕರ ಹಾಗೂ ತಹಸೀಲ್ದಾರ ಅನೀಲ ಬಡಿಗೇರ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ಪರಿಶಿಷ್ಟ ಜಾತಿಗೆ ಸೇರಿದವರು ಮೃತಪಟ್ಟ ಸಂದರ್ಭದಲ್ಲಿ ಶವ ಸಂಸ್ಕಾರಕ್ಕೆ ತೆರಳಲು ಸೂಕ್ತ ದಾರಿ ಇಲ್ಲದಿರುವುದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಸ್ಮಶಾನಕ್ಕೆ ತೆರಳುವ ದಾರಿಯನ್ನು ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿ ಬಾರಿ ಪೊಲೀಸ್ ಠಾಣೆಗೆ ದೂರು ನೀಡಬೇಕಾಗುತ್ತದೆ. ಅಧಿಕಾರಿಗಳು ಹಾಗೂ ಪೊಲೀಸರು ಬಂದು ಸಮಸ್ಯೆ ಬಗೆಹರಿಸುವಷ್ಟರಲ್ಲಿ ಎರಡು-ಮೂರು ದಿನಗಳು ಕಳೆಯುತ್ತವೆ. ಈ ವೇಳೆ ಶವವನ್ನು ಸಂಸ್ಕಾರ ಮಾಡಲಾಗದೆ ಕುಟುಂಬಸ್ಥರು ಹಾಗೂ ಸಂಬಂಧಿಕರು ತೀವ್ರ ಸಂಕಷ್ಟ ಅನುಭವಿಸಬೇಕಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಮೃತರ ಶವದ ಮುಂದೆ ಕುಳಿತು ಅಳುವ ಕುಟುಂಬದ ಮಹಿಳೆಯರು ಶವ ಸಂಸ್ಕಾರ ನಡೆಯುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ದೂರದ ಊರುಗಳಿಂದ ಬರುವ ಸಂಬಂಧಿಕರು ಕೂಡ ಸಮಸ್ಯೆಯಿಂದ ಬೇಸರಗೊಂಡು ನಮ್ಮನ್ನೇ ದೂಷಿಸಿ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಹಿಳೆಯರು ತಮ್ಮ ನೋವನ್ನು ಹಂಚಿಕೊಂಡರು.
ಗ್ರಾಮದ ಸಮಸ್ಯೆ ಕುರಿತು ಕೆಳ ಹಂತದ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ, ಅಧಿಕಾರಿಗಳು ಗ್ರಾಮಕ್ಕೆ ಬಂದು ಸಮಸ್ಯೆ ಆಲಿಸುವ ಬದಲು ಗ್ರಾಮದ ಮುಖಂಡರ ಮನೆಗೆ ಗ್ರಾಮಸ್ಥರನ್ನು ಕರೆಸಿಕೊಂಡು ಅಲ್ಲಿಯೇ ವಿಚಾರಣೆ ನಡೆಸುತ್ತಾರೆ. ಇದರಿಂದ ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುತ್ತಿಲ್ಲ ಎಂದು ಯುವಕನೊಬ್ಬ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಾಗ ಸಿಗುವವರೆಗೂ ಇಲ್ಲಿಂದ ಕದಲುವುದಿಲ್ಲ. ನಮ್ಮ ಗ್ರಾಮದಲ್ಲಿಯೇ ಸ್ಮಶಾನಕ್ಕೆ ಜಾಗ ಕಲ್ಪಿಸಿಕೊಡಿ. ಇಲ್ಲವೇ ಹಳೆ ಸ್ಮಶಾನಕ್ಕೆ ತೆರಳಲು ಶಾಶ್ವತ ದಾರಿ ವ್ಯವಸ್ಥೆ ಮಾಡಿಕೊಡಿ. ಮನುಷ್ಯ ಮೃತಪಟ್ಟ ಮೇಲಾದರೂ ಗೌರವಯುತವಾಗಿ ಅಂತ್ಯಸಂಸ್ಕಾರ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ತಕ್ಷಣ ಸ್ಮಶಾನಕ್ಕೆ ಜಾಗ ಕಲ್ಪಿಸುವಂತೆ ಆಗ್ರಹಿಸಿ ಮಹಿಳೆಯರು ತಾಲೂಕು ಆಡಳಿತ ಸೌಧದ ಎದುರು ಹಠ ಹಿಡಿದು ಕುಳಿತರು. ಸಮಸ್ಯೆಗೆ ಪರಿಹಾರ ದೊರೆಯುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಎಸಿ ಶ್ವೇತಾ ಬೀಡಿಕರ ಅವರು, ಒಂದು ವಾರದೊಳಗೆ ನಾನೇ ಕಲಬೀಳಗಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಶಂಕರ ಪೂಜಾರಿ, ಪಾಂಡು ಕಾಂಬಳೆ, ಸುಖದೇವ ಕಾಂಬಳೆ, ಯಮನಪ್ಪ ಪೂಜಾರಿ, ವಿಠ್ಠಲ ಪೂಜಾರಿ, ದುಂಡಪ್ಪ ಬೆಳ್ಳೆನ್ನವರ, ರಾಜು ಪೋತೆ, ಪ್ರಕಾಶ ಬೆಳ್ಳೆನ್ನವರ, ಯಲ್ಲವ್ವ ಕಾಂಬಳೆ, ರೇಷ್ಮಾ ಕವಟಗಿ, ನಿಂಬೆವ್ವ ಕಾಂಬಳೆ, ಮಾದೇವಿ ಬೆಳ್ಳೆನ್ನವರ, ಕಸ್ತೂರಿ ಪೂಜಾರಿ, ಹರಳಯ್ಯ ಪೂಜಾರಿ, ಶಿವಾನಂದ ಪೂಜಾರಿ ಇದ್ದರು.