ಇಳಕಲ್ಲದ ವಿಜಯ ಮಹಾಂತೇಶ ಕರ್ತೃ ಗದ್ದುಗೆ ಹಿಂದಿನ ರಸ್ತೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣಕ್ಕೆ ಭೂಮಿ ಪೂಜೆಗೆ ಸಂದರ್ಭದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
- ಅಧಿಕಾರಿಗಳ ಮೇಲೆ ಶಾಸಕ ಕಾಶಪ್ಪನವರ ಗರಂ
- ಭೂಮಿ ಪೂಜೆ ನೆರವೇರಿಸಲು ನಿರಾಕರಣೆ
- ಸರ್ಕಾರ ಮಕ್ಕಳಿಗೆ ಸೂಕ್ತ ಸ್ಥಳದಲ್ಲಿ ಶಿಕ್ಷಣ, ವಸತಿ ನೀಡಲು ಬಯಸುತ್ತದೆ.
ಇಳಕಲ್ಲ: ಒಳಚರಂಡಿ ಕಾಮಗಾರಿ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಇಲ್ಲದ ಜಾಗೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣ ಮಾಡುವುದು ತರವಲ್ಲ, ಯಾವ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಂಡಿದ್ದೀರಿ? ವಿದ್ಯಾರ್ಥಿಗಳ ರಕ್ಷಣೆ ನೀಡುವವರು ಯಾರು...?
ಶಾಸಕ ವಿಜಯಾನಂದ ಕಾಶಪ್ಪನವರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿಯಿದು.
ನಗರದ ಹೊರ ವಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕರು, ಅಲ್ಲಿನ ಸ್ಥಿತಿ-ಗತಿ ಅವಲೋಕಿಸಿ ಅಧಿಕಾರಿಗಳ ಮೇಲೆ ಗರಂ ಆದರು.
ಸರ್ಕಾರ ಮಕ್ಕಳಿಗೆ ಸೂಕ್ತ ಸ್ಥಳದಲ್ಲಿ ಶಿಕ್ಷಣ, ವಸತಿ ನೀಡಲು ಬಯಸುತ್ತದೆ. ತಾವು ಮಾಡುತ್ತಿರುವುದೇನು? ಎಂದು ಪ್ರಶ್ನೆಗಳ ಸುರಿಮಳೆಗೈದರು. ಭೂಮಿ ಪೂಜೆ ನಿರಾಕರಿಸಿ ನಿರ್ಗಮಿಸಿದರು.
ಕಾಡು ಇರುವ ಪ್ರದೇಶದಲ್ಲಿ ವಸತಿ ಶಾಲೆ ನಿರ್ಮಾಣ ಮಾಡುವುದು ಸರಿಯಲ್ಲ. ಮಕ್ಕಳ ಸುರಕ್ಷತೆ ಕೈಗೊಳ್ಳಲು ನಿತ್ಯವೂ ಪೊಲೀಸರನ್ನು ನಿಯುಕ್ತಿ ಮಾಡಲು ಸಾಧ್ಯವೇ? ವಸತಿ ಶಾಲೆಯಲ್ಲಿ ಹೆಣ್ಣು ಮಕ್ಕಳು ಇರುತ್ತಾರೆ. ತಂದೆ, ತಾಯಿ, ಮನೆ ಬಿಟ್ಟು ಶಿಕ್ಷಣಕ್ಕೆ ಬಡ ಮಕ್ಕಳು ಬರುತ್ತಾರೆ. ನಿರ್ಜನ ಪ್ರದೇಶದಲ್ಲಿ ವಸತಿ ಶಾಲೆ ನಿರ್ಮಾಣ ಮಾಡಲು ಮುಂದಾಗಿರುವುದು ಒಪ್ಪಲು ಸಾಧ್ಯವಿಲ್ಲ. ಅಧಿಕಾರಿಗಳು ಜಾಗದ ಬಗ್ಗೆ ಮೊದಲು ಸರಿಯಾದ ಮಾಹಿತಿ ನೀಡಿಲ್ಲ. ಇದರಿಂದ ಸಮಸ್ಯೆಯಾಗಿದೆ ಎಂದು ಅಸಮಾಧಾನ ಹೊರ ಹಾಕಿದರು.
2017 ರಲ್ಲಿ ನಮ್ಮ ಸರ್ಕಾರ ಇದ್ದಾಗ ಅಂಬೇಡ್ಕರ್ ವಸತಿ ಶಾಲೆ ಮಂಜೂರು ಆಗಿತ್ತು. ಆಗ ಜೋಶಿಗಲ್ಲಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಆರಂಭಿಸಲಾಗಿತ್ತು. ನಂತರ ಈ ಹಿಂದಿನ ಶಾಸಕ ದೊಡ್ಡನಗೌಡ ಪಾಟೀಲ ಕುರಿ ದೊಡ್ಡಿಯಂತಿರುವ ಶೆಡ್‌ನಲ್ಲಿ ಶಾಲೆ ಸ್ಥಳಾಂತರ ಮಾಡಿದರು. ಅವರ ಅವಧಿಯಲ್ಲಿ ಇಂತಹ ಜಾಗೆ ಗುರುತಿಸಿದ್ದಾರೆ. ಹಿಂದಿನ ಶಾಸಕರಿಗೆ ಬುದ್ದಿ ಇಲ್ಲ. ಮಕ್ಕಳ ಮೇಲೆ ಕಾಳಜಿ ಇದ್ದರೆ ಇಂತಹ ಜಾಗ ಆಯ್ಕೆ ಮಾಡುತ್ತಿರಲಿಲ್ಲ. ಈ ಸ್ಥಳ ಪ್ರಾಣಿಗಳು ಸಹ ವಾಸಿಸಲು ಸೂಕ್ತವಾಗಿಲ್ಲ ಎಂದು ಕಿಡಿಕಾರಿದರಲ್ಲದೇ ಶಾಲೆ ಸ್ಥಳಾಂತರಿಸುವ ಜೊತೆಗೆ ಸ್ವಂತ ಕಟ್ಟಡ ನಿರ್ಮಿಸಲು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪಗೆ ಮನವಿ ಮಾಡಿ 17 ಕೋಟಿ ರೂ. ತಂದಿದ್ದೇನೆ ಎಂದು ತಿಳಿಸಿದರು.