ಜಮಖಂಡಿ ತಾಲೂಕಿನ ಮೈಗೂರು ಗ್ರಾಮದ ಬಳಿ ಕೃಷ್ಣಾ ನದಿಯ ಒಡಲು ಸಂಪೂರ್ಣ ಬರಿದಾಗಿರುವುದು. 
ಬಾಗಲಕೋಟೆ

ಕೃಷ್ಣಾ ತೀರದ ಜನರ ಕಣ್ಣೀರಿಗೆ ಯಾರು ದಿಕ್ಕು ?

ಪ್ರಮುಖ ಮುಖ್ಯಾಂಶಗಳು

  • ಮುಧೋಳಕ್ಕಿರುವ ಪ್ರೀತಿ ಜಮಖಂಡಿಗೇಕಿಲ್ಲ?
  • ಉಸ್ತುವಾರಿ ಸಚಿವರ ವಿರುದ್ಧ ರೈತರ ಆಕ್ರೋಶ
  • ಉಪ್ಪು ನೀರು ಕುಡಿಯುವ ದನಕರು
ಜಮಖಂಡಿ: ಕೃಷ್ಣಾ ನದಿ ಸಂಪೂರ್ಣವಾಗಿ ಬರಿದಾಗಿದೆ. ಒಂದೂವರೆ ತಿಂಗಳಾದರೂ ಜನ-ಜಾನುವಾರುವಿನ ನೀರಿನ ಸಮಸ್ಯೆ ಬಗೆ ಹರಿದಿಲ್ಲ. ಇಷ್ಟಾದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಅಥವಾ ಅಧಿಕಾರಿಗಳಾಗಲಿ ಇತ್ತ ಸುಳಿಯದಿರುವುದು ನದಿ ತೀರದ ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ನದಿ ತೀರದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ನದಿಯ ಪಾತ್ರದಲ್ಲಿ ಗುಂಡಿಗಳನ್ನು ತೋಡಿ, ಬಸಿಗಾಲುವೆಗಳನ್ನು ನಿರ್ಮಿಸಿಕೊಂಡು ಪರದಾಡುತ್ತಿದ್ದಾರೆ. ಆದರೆ, ಇದರ ಬಗ್ಗೆ ಯಾವುದೇ ಚಕಾರ ಎತ್ತದ ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಮುಧೋಳ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದಾರೆ. ನಮ್ಮ ಸಂಕಷ್ಟ ಅವರಿಗೆ ಕಾಣಿಸುತ್ತಿಲ್ಲ ಎಂದು ನದಿ ತೀರದ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಚಿವರ ತಾರತಮ್ಯ ನೀತಿ

ಮುಧೋಳ ತಾಲೂಕಿನಲ್ಲಿ ನದಿಯ ನೀರು ಕಡಿಮೆಯಾದ ತಕ್ಷಣ ಮರುದಿನವೇ ನೀರು ಬಿಡಿಸಲು ಮುತುವರ್ಜಿ ವಹಿಸುವ ಸಚಿವ ಆರ್. ಬಿ. ತಿಮ್ಮಾಪುರ ಅವರು, ಜಮಖಂಡಿ ಭಾಗದ ಕೃಷ್ಣಾ ನದಿಗೆ ನೀರು ಹರಿಸುವಲ್ಲಿ ಅಷ್ಟೆ ಆಸಕ್ತಿ ತೋರಿಸುತ್ತಿಲ್ಲ. ಇನ್ನು ನಮಗೆ ಯಾರೂ ದಿಕ್ಕಿಲ್ಲ, ನಮ್ಮ ಹಣೆಬರಹವೇ ಇಷ್ಟೇ ಎಂದು ನದಿ ನೀರನ್ನೇ ನಂಬಿಕೊಂಡಿರುವ ರೈತರು ಬೇಸರ ತೋಡಿಕೊಂಡಿದ್ದಾರೆ.
ನಮ್ಮೂರಿನ ಕಡೆಗೆ ನೀರು ಬಿಡಿಸಲು ಉಸ್ತುವಾರಿ ಸಚಿವರಿಗೆ ಪುರುಸೊತ್ತಿಲ್ಲ. ಅವರು ಜಮಖಂಡಿಗೆ ಮದುವೆ, ಮುಂಜಿಗಳಂತಹ ಖಾಸಗಿ ಕಾರ್ಯಕ್ರಮಗಳಿಗೆ ಬರಲು ಸಮಯ ಮಾಡಿಕೊಳ್ಳುತ್ತಾರೆ. ಆದರೆ ನಮ್ಮೂರಲ್ಲಿ ಉಂಟಾಗಿರುವ ನೀರಿನ ಸಮಸ್ಯೆಯನ್ನು ಕಣ್ಣಾರೆ ನೋಡಲು ಬರುವುದಿಲ್ಲ ಎನ್ನುವುದು ನಮ್ಮ ದುರ್ದೈವ ಎಂದು ಮೈಗೂರು ಗ್ರಾಮದ ರೈತ ಮಲ್ಲು ಪಾಟೀಲ ತೀವ್ರ ಬೇಸರ ವ್ಯಕ್ತಪಡಿಸಿದರು.

ಜಾನುವಾರುವಿಗೆ ಚರ್ಮರೋಗದ ಭೀತಿ

ನದಿಯಲ್ಲಿ ನೀರಿಲ್ಲದೆ ಜಾನುವಾರು ಅಲ್ಲಿನ ಉಪ್ಪು ನೀರನ್ನೇ ಕುಡಿಯುವಂತಾಗಿದೆ. ಇದರಿಂದಾಗಿ ದನಕರುಗಳಿಗೆ ಚರ್ಮರೋಗ ಬರುವ ಸಾಧ್ಯತೆ ಹೆಚ್ಚಾಗಿದೆ. ಇಷ್ಟಾಗಿದ್ದರೂ ತಾಲೂಕು ಮಟ್ಟದ ಅಧಿಕಾರಿಗಳು ಯಾವುದೇ ಮುಂಜಾಗ್ರತಾ ಕ್ರಮ ಕೈ ಗೊಳ್ಳದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಬೇಸಿಗೆಯಲ್ಲಿ ಬರಿದಾಗುವ ನದಿ ಪಾತ್ರ

ಪ್ರತಿ ವರ್ಷ ಬೇಸಿಗೆ ಕಾಲ ಪ್ರಾರಂಭವಾಗುತ್ತಿದ್ದಂತೆ ಕೃಷ್ಣಾ ನದಿಯ ಒಡಲು ಸಂಪೂರ್ಣ ಖಾಲಿಯಾಗಿ ರಾಜಸ್ಥಾನದ ಮರುಭೂಮಿಯಂತಾಗುತ್ತದೆ. ಇದರಿಂದ ನದಿ ತೀರದ ಗ್ರಾಮಸ್ಥರು ಹನಿ ನೀರಿಗೂ ಪರದಾಡಬೇಕಾಗುತ್ತದೆ. ಆದರೆ ಮಳೆಗಾಲ ಪ್ರಾರಂಭವಾದರೆ ಸಾಕು, ಇದೇ ನದಿ ಉಕ್ಕಿ ಹರಿದು ಇಡೀ ಊರನ್ನೇ ಬಿಟ್ಟು ಓಡುವಂತಹ ಪ್ರವಾಹದ ಸ್ಥಿತಿ ನಿರ್ಮಾಣವಾಗುತ್ತದೆ. ಇದು ಇಲ್ಲಿನ ಜನರ ಕಾಯಂ ಕಷ್ಟವಾಗಿದೆ.

ರೈತ ಮಹಿಳೆಯರ ಕಣ್ಣೀರು

ಆಲಮಟ್ಟಿ ಜಲಾಶಯ ನಿರ್ಮಾಣವಾದರೆ ನಮ್ಮ ದನಕರುಗಳು ಸುಖವಾಗಿ ಇರುತ್ತವೆ ಎಂದು ನಮ್ಮ ಹಿರಿಯರು ಭೂಮಿ ಕೊಟ್ಟರು. ಆದರೆ ನಮಗೆ ನೀರಿಗಾಗಿ ಪರಿತಪಿಸುವುದು ಮಾತ್ರ ತಪ್ಪುತ್ತಿಲ್ಲ. ನದಿಯಲ್ಲಿ ಸಿಹಿ ನೀರು ಕುಡಿದು ರೂಢಿಯಾಗಿದ್ದ ನಮ್ಮ ದನಕರುಗಳಿಗೆ ಈಗ ಉಪ್ಪು ನೀರು ಕುಡಿಸಬೇಕಾಗಿದೆ. ಇದನ್ನು ನೋಡಿದರೆ ನಮ್ಮ ಹೊಟ್ಟೆಗೆ ಕಾರು ಸವರಿದ ಹಾಗೆ ಆಗುತ್ತದೆ. ನಮಗೆ ಯಾರೂ ದಿಕ್ಕಿಲ್ಲದಂತಾಗಿದೆ ಎಂದು ನದಿ ತೀರದ ರೈತ ಮಹಿಳೆಯರು ಕಣ್ಣೀರು ಹಾಕಿದರು.

ಅಧಿಕಾರಿಗಳ ನಿರ್ಲಕ್ಷ್ಯ

ಕೃಷ್ಣಾ ನದಿಯಲ್ಲಿ ಯಾವಾಗ ನೀರು ಖಾಲಿಯಾಗುತ್ತದೆ ಯಾವ ಯಾವ ಗ್ರಾಮಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಬಹುದು? ಎಂಬ ಬಗ್ಗೆ ಅಧಿಕಾರಿಗಳು ಇದುವರೆಗೆ ಯಾವುದೇ ಪೂರ್ವಭಾವಿ ಸಭೆ ನಡೆಸಿಲ್ಲ. ಈ ಭೀಕರ ಪರಿಸ್ಥಿತಿಯ ಬಗ್ಗೆ ಸರ್ಕಾರಕ್ಕೂ ಯಾವುದೇ ಮಾಹಿತಿ ನೀಡಿಲ್ಲ. ಅಧಿಕಾರಿಗಳು ಒಮ್ಮೆಯೂ ನದಿ ಪಾತ್ರಕ್ಕೆ ಬಂದು ನಮ್ಮ ಕಷ್ಟ ಕೇಳುವ ಪುರುಸೊತ್ತು ಮಾಡಿಕೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.