ಉತ್ತೂರ ಶಾಲೆ ಆವರಣದಲ್ಲಿ ಒಳಗಡೆ ಚರಂಡಿ ನೀರು ನಿಂತಿರುವುದು.
- ಶಾಸಕ ಆರ್.ಬಿ. ತಿಮ್ಮಾಪೂರ ಸ್ವಗ್ರಾಮದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ
- ಸೂಕ್ತ ಕ್ರಮವಹಿಸಲು ಆಗ್ರಹ
ಡಾ. ವೆಂಕಟೇಶ ಗುಡೆಪ್ಪನವರ, ಮುಧೋಳ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ದಶಕದ ಕನಸನ್ನು ನನಸು ಮಾಡಲು ಶಾಸಕ ಆರ್.ಬಿ. ತಿಮ್ಮಾಪೂರ ಉತ್ತೂರ ಸರ್ಕಾರಿ ಪ್ರೌಢಶಾಲೆಯನ್ನು ತಾತ್ಕಾಲಿಕ ಪದವಿ ಪೂರ್ವ ವಾಣಿಜ್ಯ ವಿಭಾಗದ ಕಾಲೇಜನ್ನಾಗಿ ಮೇಲ್ದರ್ಜೆಗೇರಿಸಿದ್ದಾರೆ.
2026-27ನೇ ಶೈಕ್ಷಣಿಕ ಸಾಲಿನಿಂದಲೇ ನೂತನ ಕಾಲೇಜು ಆರಂಭ ಮಾಡಲಿದ್ದು, ಈಗಾಗಲೇ ಪ್ರವೇಶ ಪ್ರಕಟಣೆಯೂ ಹೊರಬಿದ್ದಿದೆ. ಆದರೆ, ಇಲ್ಲಿನ ಸ್ಥಳೀಯ ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ಕಡು ನಿರ್ಲಕ್ಷ್ಯದಿಂದ ಶಾಲೆಯ ಆವರಣದ ವಾಸ್ತವ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ.
ಶಾಲೆಯಲ್ಲಿ ಕಾಲೇಜು ಆರಂಭವಾಗಿದ್ದರೂ, ಕಳೆದ ಹಲವು ತಿಂಗಳುಗಳಿಂದ ಶಾಲಾ ಆವರಣದೊಳಗೆ ಹರಿಯುತ್ತಿರುವ ಚರಂಡಿ ನೀರಿನ ಸಮಸ್ಯೆಗೆ ಮಾತ್ರ ಮುಕ್ತಿ ಸಿಕ್ಕಿಲ್ಲ. ಗ್ರಾಮದ ಪ್ಲಾಟ್ ಪ್ರದೇಶದ ಕೊಳಚೆ ನೀರು ಶಾಲೆಯ ಒಡೆದ ಕಂಪೌಂಡ್ ಗೋಡೆಯ ಮೂಲಕ ನೇರವಾಗಿ ಒಳಗಡೆ ನುಗ್ಗುತ್ತಿದೆ.
ಇದರಿಂದಾಗಿ ಮೈದಾನದ ಬಹುತೇಕ ಭಾಗ ಕೆಸರು ಗದ್ದೆಯಾಗಿ ಮಾರ್ಪಟ್ಟು, ಗಬ್ಬು ನಾರುತ್ತಿದೆ. ಹೊಸದಾಗಿ ಪ್ರವೇಶ ಪಡೆಯಲಿರುವ ಕಾಲೇಜು ವಿದ್ಯಾರ್ಥಿಗಳು, ಶಾಲಾ ಮಕ್ಕಳು ಮೂಗು ಮುಚ್ಚಿಕೊಂಡೆ ಪಾಠ ಕೇಳಬೇಕಾದ ಪರಿಸ್ಥಿತಿ ಎದುರಾಗಿದೆ. ಕಸ-ಕಡ್ಡಿ ಹಾಗೂ ಕೊಳಚೆ ನೀರು ನಿಂತಿರುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ. ಆವರಣದಲ್ಲಿ ಹಾವು-ಚೇಳುಗಳ ಕಾಟ ಹೆಚ್ಚಾಗಿದೆ.
ಅಧಿಕಾರಿಗಳ ಹಾರಿಕೆ ಉತ್ತರ
ಈ ಸಮಸ್ಯೆಯ ಕುರಿತು ಶಾಲಾ ಶಿಕ್ಷಕರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ, ಅಧಿಕಾರಿಗಳು ಕಿಂಚಿತ್ತು ಕಾಳಜಿ ತೋರುತ್ತಿಲ್ಲ. ಉತ್ತೂರ ಪಿಡಿಒ ಅವರಿಗೆ ಯಾರಾದರೂ ಸಂಪರ್ಕಿಸಿದರೆ ಬರೀ ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಾರೆ. ಅಧಿಕಾರಿಗಳ ಆಶ್ವಾಸನೆಗಳು ಕೇವಲ ಕಾಗದದ ಮೇಲಷ್ಟೇ ಉಳಿದಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳು ಕಾಲಹರಣ ಮಾಡುತ್ತಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕಾಮಗಾರಿ ತಕ್ಷಣ ಆರಂಭವಾಗದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಪಾಲಕರು ಎಚ್ಚರಿಸಿದ್ದಾರೆ. ಶಾಲಾ ಅವಽ ಮುಗಿದ ನಂತರ ಇಲ್ಲಿ ಕಿಲಿ ಮುರಿದು ಒಲಗಡೆ ಬರುವ ಕಿಡಿಗೇಡಿಗಳಿಂದ ತೊಂದರೆಯಾಗುತ್ತಿದೆ ಎಂದು ಸಿಬ್ಬಂದಿ ಹಾಗೂ ಎಸ್‌ಡಿಎಂಸಿ ಸದಸ್ಯರು ದೂರಿದ್ದಾರೆ.
"
ಸ್ವಗ್ರಾಮದ ಶಾಲೆಯನ್ನು ಕಾಲೇಜಾಗಿ ಮೇಲ್ದರ್ಜೆಗೇರಿಸಿದ ಸಚಿವರ ನಿರ್ಧಾರ ಸ್ವಾಗತಾರ್ಹ. ಆದರೆ, ಕನಿಷ್ಠ ಮೂಲ ಸೌಕರ್ಯವೂ ಇಲ್ಲದೆ ಕೊಳಚೆ ಗುಂಡಿಯಲ್ಲಿ ವಿದ್ಯಾರ್ಥಿಗಳು ಕಲಿಯುವಂತಾಗಿರುವುದು ದುರ್ದೈವ. ಕೇವಲ ಹಾರಿಕೆ ಉತ್ತರ ನೀಡುತ್ತಿರುವ ಪಿಡಿಒ ನಡೆ ಖಂಡನೀಯ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಈ ಕಡೆ ವೈಯಕ್ತಿಕ ಗಮನ ಹರಿಸಿ, ಒಡೆದ ಕಾಂಪೌಂಡ್ ದುರಸ್ತಿ ಮಾಡಿ, ಚರಂಡಿ ನೀರು ಹರಿಯದಂತೆ ಕ್ರಮ ವಹಿಸಬೇಕು.
— | ರವಿ ನ್ಯಾಮಗೌಡ, ಯುವ ಮುಖಂಡರು "
ಗ್ರಾಮ ಪಂಚಾಯಿತಿ ವತಿಯಿಂದ ಸರ್ಕಾರಿ ಪ್ರೌಢ ಶಾಲೆ ಹಾಗೂ ಗ್ರಾಮದ ಒಟ್ಟಾರೆ ಅಭಿವೃದ್ಧಿಗಾಗಿ ವಿಶೇಷ ಯೋಜನೆ ಸಿದ್ಧಪಡಿಸಲಾಗಿದೆ. ಪ್ಲಾಟ್‌ದಲ್ಲಿ ಸಿಸಿ ರಸ್ತೆ ಹಾಗೂ ಸಮರ್ಪಕ ಚರಂಡಿ ವ್ಯವಸ್ಥೆ ನಿರ್ಮಿಸಲಾಗುತ್ತಿದೆ. ಕೊಳಚೆ ನೀರು ಶಾಲಾ ಆವರಣದ ಒಳಗಡೆ ಬಾರದಂತೆ ಶಾಶ್ವತವಾಗಿ ತಡೆಯಲಾಗುವುದು.
— | ಹನಮಂತ ಭಜಂತ್ರಿ, ಪಿಡಿಒ, ಉತ್ತೂರ