ಕಲಾದಗಿಯಲ್ಲಿ ನಡೆದ ಶ್ರೀ ಸಾಯಿಬಾಬಾ ಸಭಾ ಭವನ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿರುವ ಕೊಪ್ಪಳದ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು. ಶಾಸಕ ಜೆ.ಟಿ.ಪಾಟೀಲ, ಮಾಜಿ ಸಚಿವ ಎಸ್.ಆರ್. ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್. ಪೂಜಾರ, ಎಚ್.ಆರ್. ನಿರಾಣಿ, ಮುಖಂಡರಾದ ಹನುಮಂತಗೌಡ ಬಿರಾದಾರ ಪಾಟೀಲ ವೇದಿಕೆಯಲ್ಲಿದ್ದರು.
- ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಅಭಿಮತ
- ಶ್ರೀ ಸಾಯಿಬಾಬಾ ಸಭಾಭವನ ಲೋಕಾರ್ಪಣೆ
- ಮನುಷ್ಯ ಹುಟ್ಟುವಾಗ ಉಸಿರನ್ನು ತಂದಿದ್ದಾನೆಯೇ ಹೊರತು ಹೆಸರನ್ನಲ್ಲ
ಕಲಾದಗಿ: ಮನುಷ್ಯ ಹುಟ್ಟುವಾಗ ಉಸಿರನ್ನು ತಂದಿದ್ದಾನೆಯೇ ಹೊರತು ಹೆಸರನ್ನಲ್ಲ. ಹೀಗಾಗಿ ಮನಸ್ಸು ಕೆಟ್ಟರೂ ದೇಹಕ್ಕೆ ಅಂಗವಿಕಲತೆ ಬರುತ್ತೆ. ಅದಕ್ಕೆ ಭಕ್ತಿ ಎಂಬ ಪೋಲಿಯೊ ಡ್ರಾಪ್ ಹಾಕಬೇಕು. ಜಗತ್ತಿನಲ್ಲಿ ಮನಸ್ಸು ಬಿಟ್ಟರೆ ಯಾವ ವಸ್ತುವು ಕೆಟ್ಟಿಲ್ಲ, ಜಗತ್ತಿನ ಇತಿಹಾಸದಲ್ಲಿ ಮತ್ತೊಬ್ಬರ ಜೀವನಕ್ಕೆ ಒಳ್ಳೆಯದು ಮಾಡುವವರ ಪಟ್ಟಿಯಲ್ಲಿ ನಮ್ಮ ಹೆಸರಿರುವಂತೆ ನಾವು ಬದುಕಬೇಕು ಎಂದು ಕೊಪ್ಪಳದ ಗವಿಮಠದ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.
ಇಲ್ಲಿನ ಶ್ರೀ ಸಾಯಿ ಮಂದಿರದಲ್ಲಿ ಸೋಮವಾರ ಶ್ರೀ ಸಾಯಿ ಬಾಬಾ ಸಭಾ ಭವನ ಲೋಕಾರ್ಪಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಹುಟ್ಟಿದಾಗ ಇದ್ದ ಉಸಿರು ಶಾಶ್ವತವಾಗಿ ಹೋಗುವಾಗ ನಮ್ಮ ಹೆಸರು ಉಳಿಯುವ ಹಾಗೆ ಕೆಲಸ ಮಾಡಿರಬೇಕು. ಕೆಡುವುವವರು ಬಾಳ ಮಂದಿ ಇದ್ದಾರೆ. ಕಟ್ಟುವವರು ಬೇಕು, ಕಟ್ಟಬೇಕು ಜೀವನ ಕಟ್ಟಬೇಕು. ಲೋಕಕ್ಕೆ ಒಳ್ಳೆಯಾಗುವುದನ್ನು ಕಟ್ಟಬೇಕು. ಎಲ್ಲರೂ ಒಂದು ದಿವಸ ಹೋಗುವುದೇ. ಯಾರೂ ಕಾಯಂ ಇರುವುದಿಲ್ಲ, ಮಾಡಬೇಕು ಮಾಡದಂಗ ಇರಬೇಕು ಎಂದು ಮಾರ್ಮಿಕವಾಗಿ ಹಿತನುಡಿದರು.
ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಕೊಪ್ಪಳದ ಶ್ರೀಗಳು ಅಧ್ಯಾತ್ಮ ಪ್ರವಚನಕ್ಕೆ ಸೀಮಿತವಾಗದೆ ಶೈಕ್ಷಣಿಕ, ಆಧ್ಯಾತ್ಮಿಕ ಸಾಮಾಜಿಕ ಬೆಳವಣಿಗೆ ಮಾಡಿದ್ದಾರೆ. ಸಮಾಜಕ್ಕೆ ಸೇವೆ ಮಾಡುವ ಸನ್ಮಾರ್ಗ ತೋರುವ ಸ್ವಾಮೀಜಿಯಾಗಿದ್ದು, ಎಲ್ಲರಿಗೂ ಮಾದರಿ ಆಗಿದ್ದಾರೆ. ಸಮಾಜದ ಅಭಿವೃದ್ಧಿ ಕಾರ್ಯ ರಾಜಕಾರಣಿಗಳಿಂದ ಮಾತ್ರ ಸಾಧ್ಯವಿಲ್ಲ ಮಠಗಳಿಂದಲೂ ಸಾಧ್ಯ ಎಂದು ತೋರಿಸಿಕೊಟ್ಟವರು ಗವಿಸಿದ್ಧೇಶ್ವರ ಶ್ರೀಗಳು ಎಂದು ಬಣ್ಣಿಸಿದರು.
ರಾಜಕಾರಣಿಗಳಿಂದ ಆಗಲಾರದ ಕೆಲಸವನ್ನು ಶ್ರೀಗಳು ಮಾಡಿದ್ದಾರೆ. ಬ್ಯಾರೇಜನ್ನು ನಿರ್ಮಾಣ ಮಾಡಿ 25 ಹಳ್ಳಿಗಳ ಪ್ರದೇಶವನ್ನು ನೀರಾವರಿ ಮಾಡಿದ್ದಾರೆ, ಮನಸ್ಸು ಮಾಡಿದೆ ಮಠಗಳು, ಸ್ವಾಮೀಜಿಗಳು ಏನನ್ನು ಬೇಕಾದರೂ ಮಾಡಬಲ್ಲರು ಎಂಬುದಕ್ಕೆ ಇವರೇ ಸಾಕ್ಷಿ. ವ್ಯವಸ್ಥೆ ಕೆಡುತ್ತಿರುವ ಸಂದರ್ಭದಲ್ಲಿ ಕೊಪ್ಪಳ ಶ್ರೀಗಳಂತ ಸ್ವಾಮಿಗಳ ಮಾರ್ಗದರ್ಶನ ಸಮಾಜಕ್ಕೆ ಅವಶ್ಯವಾಗಿದೆ ಎಂದರು.
ಖಜ್ಜಿಡೋಣಿಯ ಪ್ರವಚನಕಾರ ಕೃಷ್ಣಾನಂದ ಶಾಸತ್ತಿಗಳು ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾದ ಹಣಮಂತ ನಿರಾಣಿ, ಪಿ.ಎಚ್. ಪೂಜಾರ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಮಾಜಿ ಸಚಿವ ಎಸ್.ಆರ್. ಪಾಟೀಲ, ಸಾಯಿಬಾಬಾ ಸೇವಾ ಸಮಿತಿ ಹಣಮಂತಗೌಡ ಬಿರಾದಾರ ಪಾಟೀಲ ವೇದಿಕೆ ಮೇಲಿದ್ದರು. ಹಿರಿಯ ಪತ್ರಕರ್ತ ದ.ರಾ. ಪುರೋಹಿತ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗೋಪೂಜೆಮಾಡಿ ಸಸಿ ನೆಟ್ಟರು
ಇದಕ್ಕೂ ಮೊದಲು ಶ್ರೀ ಸಾಯಿಬಾಬಾ ಮಂದಿರಕ್ಕೆ ಆಗಮಿಸಿದ ಶ್ರೀಗಳು, ಶಾಸಕ ಜೆ.ಟಿ. ಪಾಟೀಲ ಗೋವು ಪೂಜೆಮಾಡಿ ಅದನ್ನು ನೂತನ ಸಭಾ ಭವನದೊಳಗೆ ಕರೆದೊಯ್ಯುವುದರ ಮೂಲಕ ಸಭಾ ಭನದ ಲೋಕಾರ್ಪಣೆ ಮಾಡಿದರು. ನಂತರ ಸಸಿ ನೆಟ್ಟರು.