ಬಾಗಲಕೋಟೆ ತಾಲೂಕಿನ ಶಿರೂರ ಗ್ರಾಮದಲ್ಲಿ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿಯವರು ಅಭ್ಯರ್ಥಿ ಉಮೇಶ ಮೇಟಿ ಪರವಾಗಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮತಯಾಚನೆ ಮಾಡಿದರು.
- ಶ್ರೀರಾಮುಲು ಟೀಕೆಗೆ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ರಾಹುಲ್ ಟಾಂಗ್
- ವಾಲ್ಮೀಕಿ ಸಮಾಜಕ್ಕೆ ಅನ್ಯಾಯವಾದರೂ ತುಟಿ ಬಿಚ್ಚಿಲ್ಲ
- ಬಾಗಲಕೋಟೆ ಉಪ ಚುನಾವಣೆ
ಬಾಗಲಕೋಟೆ: ವಾಲ್ಮೀಕಿ ಸಮಾಜಕ್ಕೆ ಅನ್ಯಾಯವಾದರೂ ತುಟಿ ಬಿಚ್ಚಿಲ್ಲ. ಸಮಾಜಕ್ಕೆ ಸತೀಶ ಜಾರಕಿಹೊಳಿ ಕೊಡುಗೆ ಬಗ್ಗೆ ಪ್ರಶ್ನಿಸಿ, ಅವರೊಬ್ಬ ಸೀಜನಲ್ ರಾಜಕಾರಣಿ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಅವರ ಟೀಕೆಗೆ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಟಾಂಗ್ ನೀಡಿದ್ದಾರೆ.
ಉಪ ಚುನಾವಣೆ ಹಿನ್ನೆಲೆಯಲ್ಲಿ ಶಿರೂರ ಮತ್ತು ಇತರೆ ಗ್ರಾಮದಲ್ಲಿ ಭಾನುವಾರ ಪ್ರಚಾರ ನಡೆಸಿದ ರಾಹುಲ್ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಶ್ರೀರಾಮಲು ನಮ್ಮ ಸಮುದಾಯದ ಹಿರಿಯ ಮುಖಂಡರು. ಆದರೆ, ನಮ್ಮ ಸಮಾಜಕ್ಕೆ ಸತೀಶ ಜಾರಕಿಹೊಳಿ ಕೊಡುಗೆ ಏನು ಎಂದು ಜನರಿಗೆ ಗೊತ್ತಿದೆ. ಅನೇಕ ಕಾರ್ಯಕರ್ತರು, ಮುಖಂಡರು ಜಾರಕಿಹೊಳಿ ಹಿಂದೆ ನಿಂತಿದ್ದಾರೆ ಎಂದರೆ ಹಾಗೆಯೇ ನಿಂತಿರಲ್ಲ. ಅವರ ಕೊಡುಗೆ ಮತ್ತು ಸೇವೆಯನ್ನು ಗುರುತಿಸಿ ಬೆಂಬಲಕ್ಕೆ ನಿಂತಿದ್ದಾರೆ ಎಂದರು.
ಬಾಗಲಕೋಟೆ ಉಪ ಚುನಾವಣೆ ತಂತ್ರಗಾರಿಕೆ ಬಗ್ಗೆ, ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೆ ರೀತಿಯಲ್ಲಿ ಜಾರಿ ಮಾಡಬೇಕಾಗುತ್ತದೆ. ತಂದೆಯವರು ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಆಂತರಿಕ ವಿಚಾರಗಳನ್ನು ವಿವಿಧ ರೀತಿಯಲ್ಲಿ ಮಾಡುತ್ತಾರೆ. ಲೋಕೋಪಯೋಗಿ ಇಲಾಖೆಯಿಂದ ಉಪ ಚುನಾವಣೆ ಸಂದರ್ಭದಲ್ಲಿ ಅನುದಾನ ಘೋಷಣೆ ಮಾಡಿರುವ ಬಗ್ಗೆ, ಎಲ್ಲ ಅನುದಾನವೂ ಅಧಿಕೃತವಾಗಿಯೇ ಘೋಷಣೆ ಆಗಿವೆ. ಎಲ್ಲೆಲ್ಲಿ ಸಮಸ್ಯೆಗಳು ಇವೆ ಅಂತಹ ಕಡೆಗೆಲ್ಲ ಇಲಾಖೆ ಅಥವಾ ಸರ್ಕಾರದ ಮಟ್ಟದಲ್ಲಿ ಸ್ಪಂದಿಸುವ ಕೆಲಸವನ್ನು ಮಾಡಿದ್ದಾರೆ. ಇದು ಕೇವಲ ಬಾಗಲಕೋಟೆ ಕ್ಷೇತ್ರಕ್ಕೆ ಸೀಮಿತವಲ್ಲ ಎಂದರು.
ಕ್ಷೇತ್ರದಲ್ಲಿ ಮತದಾರರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಕೊಡುತ್ತಿದ್ದಾರೆ. ತಮಗೂ ಈ ಉಪ ಚುನಾವಣೆ ಒಂದು ಅವಕಾಶ ನೀಡಿದೆ. ಉಪ ಚುನಾವಣೆಗಳಲ್ಲಿ ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಕಲಿಯಲು ತಮಗೊಂದು ಅವಕಾಶ ಸಿಕ್ಕಿದೆ ಎಂದು ತಿಳಿಸಿದರು.