ಹಿಪ್ಪರಗಿ ಬ್ಯಾರೇಜ್‌ನ 21 ಗೇಟ್‌ಗಳ ಮೂಲಕ ನೀರು ಹರಿಯುತ್ತಿರುವುದು. 
ಬಾಗಲಕೋಟೆ

ಹಿಪ್ಪರಗಿ ಬ್ಯಾರೇಜ್ 21ಗೇಟ್‌ಗಳಲ್ಲಿ ನೀರಿನ ಹರಿವು

ಪ್ರಮುಖ ಮುಖ್ಯಾಂಶಗಳು

  • ಒಂದೇ ದಿನ ಶೇ.25ರಷ್ಟು ನೀರಿನ ಮಟ್ಟ ಏರಿಕೆ
  • ಮುನ್ನೆಚ್ಚರಿಕಾ ಕ್ರಮ ಸೂಚಿಸಿದ ಆಡಳಿತ
ರಬಕವಿ/ಬನಹಟ್ಟಿ: ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ಹಿಪ್ಪರಗಿ ಬ್ಯಾರೇಜ್‌ಗೆ ಹರಿದು ಬರುವ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ಶನಿವಾರ ಒಂದೇ ದಿನದಲ್ಲಿ ಜಲಾಶಯದ ನೀರಿನ ಮಟ್ಟ ಶೇ.35ರಷ್ಟು ಹೆಚ್ಚಳ ಕಂಡಿದ್ದು, ಬ್ಯಾರೇಜ್ ಮತ್ತೆ ಮೈದುಂಬಿ ನಿಂತಿದೆ.
ಬ್ಯಾರೇಜ್‌ಗೆ ಪ್ರಸ್ತುತ ಸುಮಾರು 1.38ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇದರಿಂದ 22 ಕ್ರಸ್ಟ್ ಗೇಟ್‌ಗಳ ಪೈಕಿ 21 ಗೇಟ್‌ಗಳ ಮೂಲಕ ನೀರು ಹೊರ ಹರಿಯುತ್ತಿದೆ. ಕಳೆದ ವಾರದವರೆಗೆ ಬಹುತೇಕ ಒಣಗಿದ್ದ ಬ್ಯಾರೇಜ್ ಈಗ ತುಂಬಿ ಹರಿಯುತ್ತಿರುವ ದೃಶ್ಯ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.
ಮಹಾರಾಷ್ಟ್ರದ ರಾಜಾಪುರ ಸೇರಿ ಮೇಲ್ಭಾಗದ ಜಲಾನಯನ ಪ್ರದೇಶಗಳಲ್ಲಿ ಮಳೆಯ ತೀವ್ರತೆ ಮುಂದುವರಿದಿರುವುದರಿಂದ ಮುಂಬರುವ ದಿನಗಳಲ್ಲಿಯೂ ಹರಿವಿನ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ನೀರಾವರಿ ಇಲಾಖೆ ಮೂಲಗಳು ತಿಳಿಸಿವೆ.
ಹಿಪ್ಪರಗಿ ಬ್ಯಾರೇಜ್‌ದಲ್ಲಿ ಹೆಚ್ಚುತ್ತಿರುವ ನೀರಿನ ಹರಿವಿನಿಂದ ಕೃಷ್ಣಾ ನದಿ ಪಾತ್ರದ ರೈತರು ಹಾಗೂ ಸಾರ್ವಜನಿಕರಲ್ಲಿ ಆಶಾಭಾವನೆ ಮೂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನದಿ ತೀರದ ಜನರು ಅನಗತ್ಯವಾಗಿ ನೀರಿನ ಸಮೀಪ ಹೋಗದಂತೆ ಆಡಳಿತ ಸೂಚಿಸಿದೆ.